

ಸಿಂಧನೂರು: ಜಗತ್ತಿನ ಗಮನಸೆಳೆದಿದ್ದ ಸ್ವಾಮಿ ವಿವೇಕಾನಂದ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಉದ್ಯಮಿ ರಾಜೇಶ ಹಿರೇಮಠ ಹೇಳಿದರು.
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಗುರುವಾರ ಆಯೋಜಿಸಿದ್ದ ವಿವೇಕ ಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದ ಉನ್ನತ ವಿಚಾರಗಳಿಂದಾಗಿ ವಿಶ್ವದ ಗೌರವಕ್ಕೆ ಪಾತ್ರರಾಗಿದ್ದರು. 39 ವರ್ಷ ಬದುಕಿದ್ದರೂ, ಅವರ ಸಾಧನೆ ಆಗಾಧವಾಗಿದೆ. ಯುವಕರು ನೈತಿಕತೆ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ದುಶ್ಚಟದಿಂದ ದೂರವಿದ್ದು ಒಳ್ಳೆಯ ಹವ್ಯಾಸಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಸಂಕೇತ್ ಕಾಲೇಜು ಕಾರ್ಯದರ್ಶಿ ಎಸ್.ಅನಿಲ್‌ರಾಜ್ ಮಾತನಾಡಿ, ಭಾರತದ ಬಗ್ಗೆ ತಿಳಿಯಬೇಕಾದರೆ ಮೊದಲು ವಿವೇಕಾನಂದರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು. ಅವರ ಜೀವನವೇ ನಮಗೆ ಜ್ಞಾನ ಒದಗಿಸುತ್ತದೆ ಎಂದು ತಿಳಿಸಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಸದಾನಂದ ಮಹಾರಾಜ ಆಶೀರ್ವಚನ ನೀಡಿದರು. ವಂದೇ ಮಾತರಂ ಗುರುಕುಲಂ ಸಂಸ್ಥೆ ಧಾರವಾಡ ಇವರಿಂದ ಭಾರತ ದೇಶದ ಅಪೂರ್ವ ಪರಂಪರೆ ಇತಿಹಾಸ, ಚರಿತ್ರೆಯನ್ನೊಳಗೊಂಡ ಕಿರು ನಾಟಕ, ದೇಶಭಕ್ತಿ ಗೀತೆ, ನೃತ್ಯ ಕಾರ್ಯಕ್ರಮ ನೋಡುಗರ ಗಮನಸೆಳೆಯಿತು. ಸಮಗಾರ ರಾಮಣ್ಣಗೆ ಶ್ರಮಜೀವಿ ಪ್ರಶಸ್ತಿ ನೀಡಲಾಯಿತು.
ಪ್ರಮುಖರಾದ ಕೆ.ರಾಜಶೇಖರ ರೆಡ್ಡಿ , ಡಾ.ಚನ್ನನಗೌಡ ಪೋಲಿಸ್ ಪಾಟೀಲ್, ಮಧುಸೂಧನ್, ಮಹಾಂತೇಶ ಸಾಸಲಮರಿ ಕ್ಯಾಂಪ್, ನಾಗರಾಜ ಮಾಡಸಿರವಾರ, ಲಿಂಗರಾಜ್ ಗೊಗೇರಿ, ಹರೀಶ್ ಶೆಟ್ಟಿ, ಅನಿಲ್ ಕಲ್ಲೂರು, ಕಳಕಪ್ಪ ಗಡಾದ, ವೀರೇಶಗೌಡ ನಿಡಿಗೋಳ, ಬಸವರಾಜ ದಾಟನಾಳ, ತಿಮ್ಮಯ್ಯ ಶೆಟ್ಟಿ, ವಿ ಸಿ ಪಾಟೀಲ, ಶಿವಮೂರ್ತಿ, ಜೀವ ಸ್ಪಂದನ ಟ್ರಸ್ಟ್ ಸಂಸ್ಥಾಪಕ ಡಾ.ನವೀನ್, ಟ್ರಸ್ಟಿ ಅವಿನಾಶ್ ದೇಶಪಾಂಡೆ, ಚನ್ನವೀರನಗೌಡ ಇದ್ದರು.