ಸ್ವಾಭಿಮಾನಿ ಸಮಾವೇಶಕ್ಕೆ ಜಿಲ್ಲೆಯಿಂದ 6ಸಾವಿರ ಮಂದಿ

Pressmeet
Published on

ಚಿತ್ರದುರ್ಗ: ಹಾಸನದಲ್ಲಿ ಡಿ. 5ರಂದು ಆಯೋಜಿಸಿರುವ ಜನ ಕಲ್ಯಾಣ ಸ್ವಾಭಿಮಾನಿ ಸಮಾವೇಶಕ್ಕೆ ಜಿಲ್ಲೆಯಿಂದ 6 ಸಾವಿರ ಮಂದಿ ತೆರಳಲಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರು, ಕಾರ್ಮಿಕರು, ಶೋಷಿತರು, ವಿದ್ಯಾರ್ಥಿಗಳು, ನಿರುದ್ಯೋಗಿ ಯುವಸಮೂಹ, ಸ್ತ್ರೀಯರಿಗೆ ಬಲ ತುಂಬುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆಯೇ ಹೊರತು ಸಿಎಂ ಶಕ್ತಿ ಪ್ರದರ್ಶನಕ್ಕಲ್ಲ. ಏಕೆಂದರೆ ಕುಂದಿಲ್ಲ ಎಂದರು.

ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರ ಬಲವರ್ಧನೆ ಸಮಾವೇಶದ ಮುಖ್ಯ ಉದ್ದೇಶ. ಪಂಚ ಗ್ಯಾರಂಟಿಗಳಿಂದ ಕರ್ನಾಟಕ ದಿವಾಳಿಯಾಗಲಿದೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ನುಡಿದಿದ್ದರು. ಆ ರೀತಿಯಾಗಿಲ್ಲ. ಜನಪರವಿದ್ದು, ನುಡಿದಂತೆ ನಡೆದು, 17 ಬಜೆಟ್ ಮಂಡಿಸಿರುವ ರಾಜ್ಯದ ಸಿಎಂ ಸಿದ್ದರಾಮಯ್ಯ ಉತ್ತಮ ಆರ್ಥಿಕ ತಜ್ಞ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎಂದು ಹೇಳಿದರು.

ಸಿಎಂರನ್ನು ಮುಡಾದಲ್ಲಿ ಸಿಲುಕಿಸಲು ಹೊರಟ ಬಿಜೆಪಿಯವರು ಮೂಡರಾಗಿದ್ದಾರೆ. ಜನ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಕಾರಣ ಉಪಚುನಾವಣೆಯಲ್ಲೂ ಕಾಂಗ್ರೆಸ್ ಕೈಹಿಡಿದು ಬಿಜೆಪಿ ತಿರಸ್ಕರಿಸಿದ್ದಾರೆ ಎಂದರು.

2014ರಲ್ಲಿ ಅಚ್ಛೆ ದಿನ್ ಎಂಬುದಾಗಿ ಅಧಿಕಾರಕ್ಕೆ ಬಂದ ಮೋದಿ ಅವರು ಬೆಲೆ ನಿಯಂತ್ರಿಸದ ಕಾರಣ ಮೂರು ಪಟ್ಟು ಹೆಚ್ಚಾಗಿದೆ. ಅಂಬಾನಿ, ಅದಾನಿ ಸೇರಿ ದೊಡ್ಡ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಬ್ಯಾಂಕ್ ಸಾಲ ತೀರಿಸಿದ್ದಾರೆ. ಆದರೆ, ಬಡವರು, ಮಧ್ಯಮ ವರ್ಗದವರ ಕುಳಿತು ಕಾಳಜಿ ತೋರಿಲ್ಲ. ಯಾವ ಬದಲಾವಣೆ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ವಿರುದ್ಧ ಆರೋಪಿಸುವ ಸಂಸದ ಗೋವಿಂದ ಕಾರಜೋಳ ಅವರು ದಾಖಲೆ ಬಿಡುಗಡೆ ಮಾಡಲಿ. ಅದಕ್ಕೂ ಮುಖ್ಯವಾಗಿ ಚುನಾವಣೆ ವೇಳೆ ಭದ್ರಾ ಮೇಲ್ದಂಡೆ ಯೋಜನೆಗೆ ಮೊದಲ ಆದ್ಯತೆ ಎಂದು ಜನಾಶೀರ್ವಾದದಿಂದ ಗೆದ್ದಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದಿಂದ 5,300 ಕೋಟಿ ರೂ. ಅನುದಾನ ತರಲಿ ಎಂದು ಸವಾಲು ಹಾಕಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಪಂ ಮಾಜಿ ಸದಸ್ಯರಾದ ಆರ್.ನರಸಿಂಹರಾಜು, ಬಿ.ಪಿ.ಪ್ರಕಾಶ್‌ಮೂರ್ತಿ, ಪದಾಧಿಕಾರಿಗಳಾದ ಕೃಷ್ಣಮೂರ್ತಿ, ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಆರ್.ಪ್ರಕಾಶ್, ಬಿ.ಪಿ.ತಿಪ್ಪೇಸ್ವಾಮಿ, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ವಕೀಲರಾದ ರವೀಂದ್ರ, ಶರಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net