

ಬೀದರ್: ಕೊಪ್ಪಳ ಮಾದರಿಯಲ್ಲಿ ಬೀದರ್ ಜಿಲ್ಲೆಯ ರೈತರಿಗೆ ಸ್ವಾಭಿಮಾನಿ ರೈತ ಗುರುತಿನ ಚೀಟಿ ವಿತರಣೆಗೆ ವಿಶೇಷ ಅನುದಾನ ಮಂಜೂರಿ ಮಾಡುವಂತೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕೃಷಿ ಸಚಿವ ಸಿ.ಸಿ. ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದ ಅವರು, ಸ್ವಾಭಿಮಾನಿ ರೈತ ಗುರುತಿನ ಚೀಟಿಯಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಬೆಳೆ ಸಾಲ, ಪ್ರಧಾನಿ ಫಸಲ್ ಬಿಮಾ, ಪಿಎಂ ಕಿಸಾನ ಸಮ್ಮಾನ್ ಸೇರಿದಂತೆ ನಾನಾ ಯೋಜನೆ ಹಾಗೂ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ನೆರವಾಗಲಿದೆ. ಅರ್ಹ ರೈತರಿಗೆ ಸರ್ಕಾರದ ಸೌಲಭ್ಯ ದಕ್ಕಿಸುವ ಕೆಲಸ ಸಹ ಮಾಡಲಿದೆ ಎಂದು ಹೇಳಿದ್ದಾರೆ.
ರೈತರ ಹಿತ ಕಾಪಾಡುವಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದ್ದು, ಇಡೀ ರಾಜ್ಯದಲ್ಲಿ ವಿಸ್ತರಿಸಿದ್ದಲ್ಲಿ ಬಹಳಷ್ಟು ಉತ್ತಮವಾಗಲಿದೆ. ಆದ್ಯತೆ ಮೇಲೆ ಹಿಂದುಳಿದ ಬೀದರ್ ಜಿಲ್ಲೆಗೂ ಈ ಯೋಜನೆ ಬೇಗ ಜಾರಿಗೆ ಕೈಗೊಳ್ಳಬೇಕು ಎಂದು ಕೋರಿದ್ದಾರೆ.