ಸ್ವಾಭಿಮಾನದ ಬದುಕು ಸಾಗಿಸಿ

19-klr-3
Published on

ಕೋಲಾರ: ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಕುಂದುಕೊರತೆಗೆ ಸ್ಪಂದಿಸಲು ಪ್ರತಿ ತಿಂಗಳಿಗೊಮ್ಮೆ ಅದಾಲತ್ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಿದರು.

ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಸಮ್ಮಿಲನ ಸಂಸ್ಥೆ, ಸಂಗಮ ಸಂಸ್ಥೆಯ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಸೌಹಾರ್ದ-ಸಮುದಾಯ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿ ಸ್ವಾಭಿಮಾನದ ಬದುಕು ಸಾಗಿಸಿ, ಅವಶ್ಯವಿದ್ದರೆ ಬ್ಯಾಂಕ್ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಸಹಕಾರ ಸಂಘ ಸ್ಥಾಪಿಸಿ ಆರ್ಥಿಕ ನೆರವು ಪಡೆಯಿರಿ. ನಮ್ಮ ನಡೆ ಸಮಾನತೆಯ ಕಡೆಗಿರಲಿ, ನಮ್ಮಲ್ಲಿ ಒಬ್ಬರನ್ನಾಗಿ ಭಾವಿಸೋಣ, ಪ್ರೀತಿಸೋಣ ಎಂದು ಆಶಿಸಿದರು.

ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಸಂಬಂಧ ಸುಪ್ರೀಂಕೋರ್ಟ್ ತೀರ್ಪು, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಮಸೂದೆ ಮೂಲಕ ಈ ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಇನ್ನಷ್ಟು ಚುರುಕುಗೊಳ್ಳಬೇಕು. ಇಲಾಖೆಗಳಲ್ಲಿ ಸರ್ಕಾರದ ಯೋಜನೆ ಮುಟ್ಟಿಸಬೇಕು. ಈ ಸಂಬಂಧ ಪ್ರತಿ ತಿಂಗಳಿಗೊಮ್ಮೆ ಶಿಬಿರ, ಅದಾಲತ್ ನಡೆಸಿ ಕುಂದುಕೊರತೆ ಆಲಿಸಬೇಕು, ಸರ್ಕಾರದ ವಿಶೇಷ ವಸತಿ ಯೋಜನೆಗಳಲ್ಲಿ ಅರ್ಹರನ್ನು ಗುರುತಿಸಿ ತಮ್ಮ ಅಧ್ಯಕ್ಷತೆಯ ಸಮಿತಿ ಮುಂದೆ ತರುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಂ.ಜಿ. ಪಾಲಿಗೆ ಸೂಚಿಸಿದರು.

ಸಂಗಮ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ರಾಜೇಶ್ ಮಾತನಾಡಿ, ಜಿಲ್ಲೆಯಲ್ಲಿ 1600ಕ್ಕೂ ಹೆಚ್ಚು ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರಿದ್ದು, ವಸತಿ ಸೌಲಭ್ಯ ಸೇರಿ ಹಲವು ಬೇಡಿಕೆ ಈಡೇರಿಸಬೇಕು ಎಂದರು.

ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್, ಸಂಗಮ ಸಂಸ್ಥೆ ಕಾರ್ಯಕಾರಿ ನಿರ್ದೇಶಕ ಶ್ರೀನಿವಾಸ್, ತಾಂತ್ರಿಕ ಸಹಾಯ ಘಟಕದ ಕಾರ್ಯಕ್ರಮ ಅಧಿಕಾರಿ ಕೆ.ಎಂ.ನಾಗೇಂದ್ರ, ಕೋಲಾರ-ಚಿಕ್ಕಬಳ್ಳಾಪುರ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್ ಗಣೇಶ್, ಸಂಗಮ ಸಂಸ್ಥೆ ಕಾರ್ಯಕ್ರಮ ವ್ಯವಸ್ಥಾಪಕರಾದ ನಿಶಾ ಗೂಳೂರ್, ಸಮ್ಮಿಲನ ಸಂಸ್ಥೆಯ ಖಜಾಂಚಿ ರಾಧಿಕಾ, ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್ ಪ್ರಧಾನ ಕಾರ್ಯದರ್ಶಿ ಮಂಜುಳಮ್ಮ, ಸಂಗಮ ಸಂಸ್ಥೆ ಜಿಲ್ಲಾ ಸಂಯೋಜಕಿ ಅಶ್ವಿನಿ ರಾಜನ್, ಕಾರ್ಯದರ್ಶಿ ಎಂ.ಹರೀಶ್, ಸಮ್ಮಿಲನ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಜಿ.ಕೃಷ್ಣಮೂರ್ತಿ ಇದ್ದರು. ಸಾಂಕೇತಿಕವಾಗಿ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಗುರುತಿನ ಚೀಟಿ ವಿತರಿಸಲಾಯಿತು.

ಮನಮಿಡಿದ ನಾಟಕ: ಹುಡುಗನಾಗಿ ಹೆಣ್ಣಿನ ಭಾವನೆ, ಅಲಂಕಾರ ಮಾಡಿಕೊಳ್ಳುವ ಮಗನನ್ನು ಮನೆ ಬಿಟ್ಟು ಹೋಗುವಂತೆ ಪಾಲಕರು ಹೇಳಿದಾಗ ಬೀದಿಗೆ ಬರುವ ಮಗ ಹಸಿವಿನಿಂದ ಬಳಲಿ ಅಂಗಲಾಚುತ್ತಿದ್ದ ಸಂದರ್ಭದಲ್ಲಿ ತೃತೀಯ ಲಿಂಗಿಗಳ ಕಣ್ಣಿಗೆ ಬಿದ್ದು ಆಶ್ರಯ ಪಡೆಯುವ ಚಿತ್ರಣ, ಶಿಕ್ಷಣ ಪಡದರೂ ಉದ್ಯೋಗ ಕೇಳಿಕೊಂಡು ಹೋದಾಗ ನಿರಾಕರಣೆ, ಮದುವೆಯಾಗುವುದಾಗಿ ನಂಬಿಸಿ ಮೋಸ ಹೋಗುವುದು... ಹೀಗೆ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಕಷ್ಟದ ಜೀವನವನ್ನು ‘ಜೀವನವೇ ಹೋರಾಟ’ ಎಂಬ ಕಿರು ನಾಟಕದಲ್ಲಿ ಸಮುದಾಯದವರು ಕಟ್ಟಿಕೊಟ್ಟಿದ್ದು ಮನಮಿಡಿಯುವಂತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net