

ಸಕಲೇಶಪುರ: ಭೀಮ ಕೊರೆಂಗಾವ್ ಯುದ್ದ ದಲಿತರ ಸ್ವಾಭಿಮಾನದ ಸಂಕೇತವಾಗಿದೆ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.
ಪಟ್ಟಣದ ಟಾಟಾ ಮೈದಾನದಲ್ಲಿ ಪರಿಶಿಷ್ಟ ಜಾತಿ-ವರ್ಗಗಳ ಒಕ್ಕೂಟ ಸೋಮವಾರ ಹಮ್ಮಿಕೊಂಡಿದ್ದ 206ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಗ್ಗಟ್ಟಿನ ಮೂಲಕ ಸಾಧನೆ ಮಾಡಬಹುದಾಗಿದೆ. ತುಳಿತಕ್ಕೊಳಗಾದ ನಾವುಗಳು ಇದುವರೆಗೆ ಒಗ್ಗಟ್ಟಿನ ಕೊರತೆಯಿಂದ ಬಳಲುತ್ತಿದ್ದು ಇನ್ನಾದರೂ ತಿಳಿಯಬೇಕಿದೆ. ನಮ್ಮ ಮನಸ್ಥಿತಿ ಬದಲಾಗದೆ ಪರಿಸ್ಥಿತಿ ಬದಲಾಗದು. ಅಂಬೇಡ್ಕರ್ ಹೇಳಿಕೆಯಂತೆ ನಮ್ಮ ಪೂರ್ವಿಕರ ಚರಿತ್ರೆಗಳನ್ನು ಹೆಕ್ಕಿ ತೆಗೆಯುವ ಕೆಲಸ ಮಾಡುವ ಮೂಲಕ ನೆನಪುಗಳನ್ನು ದಾಖಲಿಸಬೇಕಿದೆ ಎಂದರು.
ರಾಮಯಾಣ ಹೆಣ್ಣಿಗಾಗಿ, ಮಹಾಭಾರತ ಮಣ್ಣಿಗಾಗಿ ನಡೆದ ಯುದ್ದವಾದರೆ, ಕೊರೇಗಾಂವ್ ಸ್ವಾಭಿಮಾನಕ್ಕಾಗಿ ನಡೆದ ಯುದ್ದ. ಭಾರತದ ರಾಜರು ಚರಿತ್ರೆ ಬದಲಿಸಲು ಖಡ್ಗ ಬಳಿಸಿದರು. ಆದರೂ ಚರಿತ್ರೆ ಬದಲಾಗಲಿಲ್ಲ. ಆದರೆ, 40 ವರ್ಷದಲ್ಲಿ ಅಂಬೇಡ್ಕರ್ ಪೆನ್ನಿನ ಮೂಲಕ ಇತಿಹಾಸ ಬದಲಿಸಿದರು. ದುರಂತವೆಂದರೆ ಪೆನ್ನಿನ ಯುಗವಾಗ ಬೇಕಿದ್ದ ದೇಶ ಇಂದು ಗನ್ನಿನೆಡೆಗೆ ಸಾಗುತ್ತಿರುವುದು ಬೇಸರದ ಸಂಗತಿ. ಎಲ್ಲ ಯುದ್ದಗಳು ಇತಿಹಾಸದಲ್ಲಿ ದಾಖಲಾಗಿದೆ. ಆದರೆ, ಭೀಮಾ ಕೋರೆಗಾಂವ್ ಯುದ್ದವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ರಾಜ್ಯ ಸಮಿತಿ ಸದಸ್ಯ ಶ್ರೀಧರ್ ಕಲಿವೀರ್ ಮಾತನಾಡಿ, ಪೂರ್ವಕಾಲದ ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಸ್ಪಶ್ಯತೆ ಹೋಗಲಾಡಿಸುವ ನಿಟ್ಟಿನಲ್ಲಿ ಅನಿವಾರ್ಯವಾಗಿ ಕೋರೆಗಾಂವ್ ಯುದ್ದದಲ್ಲಿ ಖಡ್ಗ ಹಿಡಿಯಲೇ ಬೇಕಿತ್ತು. ಇಂತಹ ಪರಿಸ್ಥಿತಿ ಸೃಷ್ಟಿಸಿದ ಪೇಶ್ವೆಗಳು ಮೊದಲು ನಮ್ಮ ಕೋಪವನ್ನು ಎದುರಿಸಬೇಕಾಯಿತು. ಅಂದಿನಿಂದ ಹಂತಹಂತವಾಗಿ ದೇಶ-ವಿದೇಶದಲ್ಲಿ ದಲಿತ ಸಮಾಜದ ಶ್ರೇಷ್ಠತೆ ಅರಿವಾಗುತ್ತಾ ಬಂದಿದೆ. ಇದೇ ಕಾರಣಕ್ಕೆ ಕೋರೆಗಾಂವ್ ವಿಜಯೋತ್ಸವ ನಮಗೆ ಶ್ರೇಷ್ಠವಾಗಿ ಉಳಿದಿದೆ ಎಂದು ಸ್ಮರಿಸಿದರು.
ನಳಂದ ಬೌದ್ಧ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಶ್ರೀ ಭಂತೆ ಬೋಧಿದತ್ತ ತೇರ, ಕರ್ನಾಟಕ ಬೌದ್ಧ ಸಮಾಜದ ಅಧ್ಯಕ್ಷ ಹಾ.ರಾ.ಮಹೇಶ್, ನಲ್ಲುಲ್ಲಿ ಈರಪ್ಪ, ಮಧು ಹೊಲೆಯರ್, ಹೆತ್ತೂರು ಅಣ್ಣಯ್ಯ, ಮಹಾಂತಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಹಳೇಬಸ್ ನಿಲ್ದಾಣದಿಂದ ಸಕಲೇಶ್ವರಸ್ವಾಮಿ ದೇವಸ್ಥಾನ ಹಾಗೂ ಮರಳಿ ಹಳೇಬಸ್ ನಿಲ್ದಾಣದವರಗೆ ಮೆರವಣಿಗೆ ನಡೆಸಲಾಯಿತು.