ಸ್ವಾಧೀನ ಪಡೆದ ಭೂಮಿ ಹಿಂದಿರುಗಿಸಿ; ಭೂ ಸಂತ್ರಸ್ತರ ಹೋರಾಟ ಸಮಿತಿಯಿಂದ ಆಗ್ರಹ

SRINIVAS MURTHI- press meet (6)
Published on

ಹಾಸನ: ತಾಲ್ಲೂಕಿನ 11 ಗ್ರಾಮಗಳ ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದ್ದ ಕೆಐಎಡಿಬಿ, ಕೆಲವು ರೈತರಿಗೆ ವಾಪಸ್ ಭೂಮಿ ನೀಡಿಲ್ಲ. ಭೂಮಿ ನೀಡಿದ ಕುಟುಂಬಕ್ಕೆ ಒಂದು ಉದ್ಯೋಗ ಎಂಬ ಭರವಸೆಯನ್ನೂ ಈಡೇರಿಸಿಲ್ಲ ಎಂದು ಭೂ ಸಂತ್ರಸ್ತರ ಹೋರಾಟ ಸಮಿತಿಯ ಶ್ರೀನಿವಾಸ್‌ಮೂರ್ತಿ ದೂರಿದರು.

ಈಗ ನಮಗೆ ಜಮೀನಿಲ್ಲ. ಸರ್ಕಾರದ ಕಡೆಯಿಂದ ಯಾವುದೇ ಅನುಕೂಲ ಆಗಿಲ್ಲ. ಸ್ವಾಧೀನಪಡಿಸಿಕೊಂಡ ಜಮೀನಿನ ವ್ಯಕ್ತಿವಾರು ದಾಖಲೆಗಳನ್ನು ಪ್ರಕಟಿಸಿ ಭೂಮಿ ನೀಡಿದ ರೈತರಿಗೆ ಕನಿಷ್ಠ ಒಂದು ಗುರುತಿನ ಚೀಟಿಯನ್ನಾದರೂ ನೀಡಿದರೆ ಸರ್ಕಾರದಲ್ಲಿ ರೈತರು ಸವಲತ್ತು ಪಡೆಯಲು ಅನುಕೂಲವಾಗಲಿದೆ. ಗುರುತಿನ ಚೀಟಿ ನೀಡಲಾದರೂ ಕ್ರಮ ಕೈಗೊಳ್ಳಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಸಬಾ ಮತ್ತು ಶಾಂತಿಗ್ರಾಮ ಹೋಬಳಿಗೆ ಸೇರಿದ ಬೊಮ್ಮನಾಯ್ಕನಹಳ್ಳಿ, ಚನ್ನಪಟ್ಟಣ, ಚಿಕ್ಕಬಸವನಹಳ್ಳಿ, ದೊಡ್ಡಬಸವನಹಳ್ಳಿ, ಕೌಶಿಕ, ಸಮುದ್ರವಳ್ಳಿ, ಸಂಕಲಾಪುರ, ಪೆರುಮೇನಹಳ್ಳಿ, ನಾಗತವಳ್ಳಿ, ಕೊಕ್ಕನಘಟ್ಟ, ಹನುಮಂತಪುರ ಸೇರಿ ಒಟ್ಟು 11 ಗ್ರಾಮಗಳಲ್ಲಿ ಹಲವು ವರ್ಷಗಳ ಹಿಂದೆ 2,477 ಎಕರೆ ಭೂಮಿ ಸ್ವಾಧೀನ ಮಾಡಿದೆ. ಆದರೆ ಯಾವುದೇ ಉದ್ಯಮ ಆರಂಭಿಸದ ಕಾರಣ, ರೈತರು ನೀಡಿರುವ ಜಮೀನಿನ ಬದಲಾಗಿ ಪ್ರೋರೇಟಾ ದರದಲ್ಲಿ ಅಭಿವೃದ್ಧಿಪಡಿಸಿದ ಜಮೀನನ್ನು ಮಂಜೂರು ಮಾಡಿಕೊಡಬೇಕು ಎಂಬ ನಿಯಮ ಇದೆ. ಕೈಗಾರಿಕಾ ಅಭಿವೃದ್ಧಿಗಾಗಿ ಜಮೀನು ನೀಡುವ ಕುಟುಂಬಗಳ ಒಬ್ಬರಿಗೆ ಸ್ಥಾಪಿತವಾಗುವ ಉದ್ಯಮದಲ್ಲಿ ಕೆಲಸ ದೊರಕುತ್ತದೆಂಬ ಆಶಾಭಾವದಿಂದ ಫಲವತ್ತಾದ ಜಮೀನನ್ನು ಅತ್ಯಂತ ಕಡಿಮೆ ದರಕ್ಕೆ 1 ಎಕರೆಗೆ 50-60 ಸಾವಿರ ರೂ.ಗೆ ನೀಡಿದೆವು. 1990-1993ರ ಅವಧಿಯಲ್ಲಿ ಸ್ವಾಧೀನ ಪಡಿಸಿಕೊಂಡರೂ, 2008 ರವರೆಗೂ ಯಾವುದೇ ಕಾರ್ಖಾನೆ ಸ್ಥಾಪನೆಯಾಗಿಲ್ಲ. ಹೀಗಾಗಿ ನಮ್ಮ ಜಮೀನು ನಮಗೆ ವಾಪಸ್ ಕೊಡುವಂತೆ ಕಳೆದ 17 ವರ್ಷಗಳಿಂದ ಕಾನೂನು ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಒಂದು ತಾರ್ತಿಕ ಮತ್ತು ತಾತ್ವಿಕ ಅಂತ್ಯ ಕಂಡುಕೊಳ್ಳಬೇಕೆಂಬ ಉದ್ದೇಶದಿಂದ ಹೋರಾಟ ಮಾಡುತ್ತಿದ್ದೇವೆ. ಮುಂದುವರಿದ ಭಾಗವಾಗಿ ಪರಿಷ್ಕೃತ ಮನವಿಯಂತೆ ಕ್ರಮ ತೆಗೆದುಕೊಳ್ಳುವಂತೆ ಸಿಎಂ, ಸರ್ಕಾರ, ಕೈಗಾರಿಕಾ ಸಚಿವರು, ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ ಎಂದರು.

ಸರ್ಕಾರ ಅಭಿವೃದ್ಧಿಪಡಿಸಿರುವ ಮತ್ತು ತಮ್ಮ ಸ್ವಾಧೀನದಲ್ಲೇ ಖಾಲಿ ಜಮೀನಿನಲ್ಲಿ ರೈತರಿಂದ ಸ್ವಾಧೀನಪಡಿಸಿಕೊಂಡ ಜಮೀನಿನ ಬದಲು ಶೇ.25 ರಷ್ಟು ಅಭಿವೃದ್ಧಿಪಡಿಸಿದ ಜಮೀನನ್ನು ಪ್ರೋರೇಟಾ ದರದಲ್ಲಿ ಮಂಜೂರು ಮಾಡಬೇಕು. ನಮಗೆ ಮಂಜೂರು ಮಾಡುವ ಜಮೀನಿನ ಕ್ಷೇತ್ರಕ್ಕೆ ಈ ಹಿಂದೆ ನೀಡಿದ ಪರಿಹಾರವನ್ನು ಪ್ರೋರೇಟಾ ದರದಲ್ಲಿ ಹಿಂತಿರುಗಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಭೂ ಸಂತ್ರಸ್ತರ ರೈತ ಹೋರಾಟ ಸಮಿತಿಯ ಸುರೇಶ್, ಕಮಲಮ್ಮ, ಪುಟ್ಟಸ್ವಾಮಿಗೌಡ ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net