

ಹಾಸನ: ಸಮಸ್ತ ನಾಗರಿಕ ಬಂದುಗಳಿಗೂ 77ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. 2 ಶತಮಾನಗಳಿಗೂ ಅಧಿಕ ಕಾಲದ ಬ್ರಿಟಿಷ್ ಆಡಳಿತದ ದಾಸ್ಯದಿಂದ ಹೊರ ಬಂದು ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರ ಉದಯಿಸಿದ ಸುದಿನ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಫಲವಾಗಿ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಲಭಿಸಿದ್ದು, ಇದೀಗ 76 ವರ್ಷ ಕಳೆದಿವೆ. ಸ್ವಾತಂತ್ರ್ಯದ ಈ ಸಂತಸಕ್ಕೆ ಕಾರಣರಾದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಸ್ಮರಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಮಂಗಳವಾರ 77ನೇ ಸ್ವಾತಂತ್ರೊೃೀತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಬಾಲ ಗಂಗಾಧರ ತಿಲಕ್, ಸರ್ದಾರ್ ವಲ್ಲಭ ಭಾಯಿ ಪಟೇಲ್, ಜವಾಹರಲಾಲ್ ನೆಹರು, ಸರೋಜಿನಿ ನಾಯ್ಡು, ಆನಿಬೆಸೆಂಟ್, ಝಾನ್ಸಿರಾಣಿ ಲಕ್ಷ್ಮೀ ಬಾಯಿ, ತಾತ್ಯಾಟೋಪಿ, ಲಾಲ್ ಬಹದ್ದೂರ್ ಶಾಸ್ತ್ರಿ, ಬಂಕಿಮ್ ಚಂದ್ರ ಚಟರ್ಜಿ, ಸುಭಾಷ್ ಚಂದ್ರ ಬೋಸ್ ಹೀಗೆ ಸಹಸ್ರಾರು ನೇತಾರರು ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿ ಇರಿಸಿದವರು ಎಂದು ಸ್ಮರಿಸಿದರು.
ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕವೂ ತನ್ನದೇ ಆದ ಕೊಡುಗೆ ನೀಡಿದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಎನ್.ಎಸ್.ಹರ್ಡೀಕರ್, ಗಂಗಾಧರ ರಾವ್ ದೇಶಪಾಂಡೆ, ಆರ್.ಆರ್.ದಿವಾಕರ್, ಆಲೂರು ವೆಂಕಟರಾಯರು, ಸದಾಶಿವರಾಯ, ಎಸ್. ನಿಜಲಿಂಗಪ್ಪ ಹಾಗೂ ಹಾಸನ ಜಿಲ್ಲೆಯ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಜಿ.ಎಸ್.ಸಂಪತ್ ಅಯ್ಯಂಗಾರ್, ಹಾರ‌್ನಳ್ಳಿ ರಾಮಸ್ವಾಮಿ, ರಾಮಚಂದ್ರರಾಯರು, ಬೋರಣ್ಣಗೌಡರು, ಸಿದ್ದನಂಜಪ್ಪ, ಎಲ್.ಟಿ.ಕಾರ್ಲೆ ಯಶೋಧರ ದಾಸಪ್ಪ, ಸೇರಿದಂತೆ ನೂರಾರು ಮಂದಿ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ವಿವಿಧ ರೀತಿಯ ಚಳವಳಿಗಳಲ್ಲಿ ಪಾಲ್ಗೊಂಡಿದ್ದಾರೆ. ಅವರಿಗೂ ನಮ್ಮ ನಮನಗಳು ಎಂದರು.
ಹಾಸನ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಚಳವಳಿ ತೀವ್ರವಾಗಿಯೇ ನಡೆದಿತ್ತು. ಅಸಹಕಾರ ಚಳವಳಿ, ಕರ ನಿರಾಕರಣೆ, ಸ್ವದೇಶಿ ಆಂದೋಲನ, ಮಾಡು ಇಲ್ಲವೇ ಮಡಿ ಆಂದೋಲನ ಸೇರಿದಂತೆ ದೇಶಾದ್ಯಂತ ನಡೆಯುತ್ತಿದ್ದ ಹೋರಾಟಕ್ಕೆ ಜಿಲ್ಲೆಯ ಜನರು ದೊಡ್ಡದಾಗಿಯೇ ಧ್ವನಿಗೂಡಿಸಿ, ಸಂಪೂರ್ಣವಾಗಿ ಪಾಲ್ಗೊಂಡಿದ್ದರು. 1920ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಸನ ಜಿಲ್ಲೆಯಿಂದ 800 ಮಂದಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.
ರಾಮಸ್ವಾಮಿ ಅಯ್ಯಂಗಾರ್, ಸಂಪತ್ ಅಯ್ಯಂಗಾರ್, ಹಾರನಹಳ್ಳಿ ರಾಮಸ್ವಾಮಿ ಅವರ ನೇತೃತ್ವದಲ್ಲಿ ಗೊರೂರು, ಅರಕಲಗೂಡು, ಹಾಸನ, ಚನ್ನರಾಯಪಟ್ಟಣ, ಹಿರೀಸಾವೆ, ಅರಸೀಕೆರೆ, ನಿಟ್ಟೂರು, ಸಾಲಗಾಮೆ, ಬೇಲೂರು ಮತ್ತಿತರೆಡೆಗಳಲ್ಲಿ ಹಲವು ಹೋರಾಟಗಳು ನಡೆದವು. ಮಹಾತ್ಮ ಗಾಂಧೀಜಿಯವರು ಸಹ ಬೇಲೂರು, ಹಾಸನ, ಅರಸೀಕೆರೆ, ಹೊಳೆನರಸೀಪುರಕ್ಕೆ ಆಗಮಿಸಿ ಹೋರಾಟಗಾರರನ್ನು ಪ್ರೇರೇಪಿಸಿದ್ದನ್ನು ನಾವು ಸ್ಮರಿಸಬೇಕಿದೆ ಎಂದು ಹೇಳಿದರು.
ಕಸ್ತೂರ ಬಾ ಗಾಂಧಿಯವರ ಅನುಯಾಯಿ ಆಗಿದ್ದ ಯಶೋಧರಾ ದಾಸಪ್ಪನವರು, ದುದ್ದದ ಮಂಜಪ್ಪಗೌಡರು, ಅವರ ಹೆಂಡತಿ ದ್ಯಾವಮ್ಮ, ಬಾಗಿವಾಳು ಚಿಕ್ಕಣ್ಣ, ಹಾರನಹಳ್ಳಿ ರಾಮಸ್ವಾಮಿ, ಕೆ.ಎಂ. ರುದ್ರಪ್ಪ ಸ್ವಾತಂತ್ರ್ಯ ಚಳವಳಿಯಜತೆಗೆ ಮದ್ಯಪಾನ ವಿರೋಧಿ ಜಾಗೃತಿ ಚಟುವಟಿಕೆಗಳಲ್ಲಿಯೂ ತೊಡಗಿದ್ದರು ಎಂದರು.
ಬ್ರಿಟಿಷರ ದಬ್ಬಾಳಿಕೆಯಲ್ಲಿ ಸರ್ವ ಸಂತೋಷವನ್ನು ಕಳೆದುಕೊಂಡು ಹಿಂದುಳಿದಿದ್ದ ಭಾರತ ಏಳು ದಶಕಗಳಲ್ಲಿ ಜಗತ್ತಿನ ಬಲಾಢ್ಯ ರಾಷ್ಟ್ರಗಳಲ್ಲೊಂದಾಗಿ ಬೆಳೆದು ನಿಂತಿದೆ. ವಿಜ್ಞಾನ, ತಂತ್ರಜ್ಞಾನ, ಕಲೆ, ಶಿಕ್ಷಣ, ಕ್ರೀಡೆ, ಸಾಹಿತ್ಯ, ಸಂಸ್ಕೃತಿ, ಕೈಗಾರಿಕೆ ಹೀಗೆ ಎಲ್ಲಾ ವಿಚಾರಗಳಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇವೆ. ವೈರಿ ರಾಷ್ಟ್ರಗಳ ದುಸ್ಸಾಹಸಗಳನ್ನು ಮೆಟ್ಟಿನಿಂತು ನಮ್ಮ ರಕ್ಷಣಾ ಸಾಮರ್ಥ್ಯವನ್ನು ಸಾಬೀತು ಮಾಡಿದ್ದೇವೆ. ಆಹಾರ ಉತ್ಪಾದನೆಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ ಎಂದು ಹೇಳಿದರು.
ಹಾಸನ ಜಿಲ್ಲೆಯಲ್ಲಿ ಪ್ರಮುಖವಾಗಿ ಹೇಮಾವತಿ, ಯಗಚಿ, ವಾಟೆಹೊಳೆ ಜಲಾಶಯಗಳಿದ್ದು ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಬಳಕೆಯಾಗುತ್ತಿದೆ. ಹೇಮಾವತಿ ನದಿಯು ಕಾವೇರಿ ನದಿಯ ಉಪನದಿಯಾಗಿದ್ದು, ಎಡದಂಡೆ ಮತ್ತು ಬಲದಂಡೆ ಕಾಲುವೆಗಳಾಗಿ ವಿಂಗಡಿಸಲಾಗಿದೆ. ಇದರ ಜೊತೆ ಏತ ನೀರಾವರಿಗಾಗಿ ಅರಕಲಗೂಡು, ಬಾಗೂರು-ನವಿಲೆ ಮುಂತಾದೆಡೆ ಕಾಲುವೆ ನಿರ್ಮಿಸಲಾಗಿದೆ. ಹೇಮಾವತಿ ಜಲಾಶಯವು ಹಾಸನ-ತುಮಕೂರು-ಮಂಡ್ಯ ಜಿಲ್ಲೆಯ ರೈತರಿಗೆ ವರದಾನವಾಗಿದ್ದು, ಹೇಮಾವತಿ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ನೀರಾವರಿ ಮತ್ತು ಕುಡಿಯುವ ನೀರುಬಳಕೆ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ತಿಳಿಸಿದರು.
ವಿಮಾನ ನಿಲ್ದಾಣ ಕಾಮಗಾರಿ ಶೀರ್ಘ ಪೂರ್ಣ
ಹಾಸನ ನಗರದ ಹೊರವಲಯದ ಬೂವನಹಳ್ಳಿಯಲ್ಲಿ 200 ಕೋಟಿ ರೂ.ಗೂ ಅಧಿಕ ವೆಚ್ಚದ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು, 2023ರ ಡಿಸೆಂಬರ್ ವೇಳೆಗೆ ವಿಮಾನ ಹಾರಾಟ ಪ್ರಾರಂಭವಾಗುವ ನಿರೀಕ್ಷೆ ಇದೆ. ಹಾಗೆಯೇ ಅರಸೀಕೆರೆಯಲ್ಲಿ 58 ಕೋಟಿ ರೂ. ವೆಚ್ಚದ ಇಂಜಿನಿಯರಿಂಗ್ ಕಾಲೇಜು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು.
ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ
ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ವಿವಿಧ ಶಾಲೆಗಳ ಒಟ್ಟು 180 ವಿದ್ಯಾರ್ಥಿಗಳು ಬ್ರಿಟಿಷರ ವಿರುದ್ಧ ಹೋರಾಡಿದ ವಿವಿಧ ಚಿತ್ರಣವನ್ನು ನೃತ್ಯ ರೂಪಕದ ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ಸಾರ್ವಜನಿಕರ ಮನಸೂರೆಗೊಂಡಿತು.
ತಾಳೆ ಸಸಿ ಹಾಗೂ ಕಿರುಹೊತ್ತಿಗೆ ಬಿಡುಗಡೆ:
ತೋಟಗಾರಿಕೆ ಇಲಾಖೆ ವತಿಯಿಂದ ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ತಾಳೆ ಸಸಿಗಳನ್ನು ವಿತರಣೆ ಮಾಡಲಾಯಿತು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರ ತಂದಿರುವ ಪ್ರಗತಿಪರ ಅಭಿವೃದ್ಧಿಗಾಗಿ ನುಡಿದಂತೆ ನಡೆದಿದ್ದೇವೆ ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿಲಾಯಿತು.
ಸಾಧಕರಿಗೆ ಸನ್ಮಾನ
ಸ್ವಾತಂತ್ರ್ಯ ಹೋರಾಟಗಾರರ ವಿಧವಾ ಪತ್ನಿಯರಿಗೆ, ಸಮಾಜಸೇವೆ, ಪತ್ರಿಕೋದ್ಯಮ ,ಹೋಂ ಗಾರ್ಡ್ಸ್, ಅಗ್ನಿಶಾಮಕ ವಿಭಾಗ, ರಕ್ತದಾನಿಗಳು, ಕ್ರೀಡೆ, ಪೌರಕಾರ್ಮಿಕರು, ಪೋಲೀಸ್ ಇಲಾಖೆ, ಅರಣ್ಯ ಇಲಾಖೆಯಲ್ಲಿ ಹುತಾತ್ಮರಾಗಿರುವರಿಗೆ, ಮಾಜಿ ಸೈನಿಕರಿಗೆ ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಸ್ಕೌಟ್ಸ್ ಮತ್ತು ಗೈಡ್, ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಕಾಲೇಜು ಶಿಕ್ಷಣದಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು, ಭಾರತ ಸೇವಾದಳ ರಸಪ್ರಶ್ನೆ ಸರ್ಕಾರಿ ಸೇವೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿರುವವರಿಗೆ ಇದೇ ಸಂರ್ಭದಲ್ಲಿ ಸನ್ಮಾನ ಮಾಡಲಾಯಿತು.
ಆಕರ್ಷಕ ಪಥ ಸಂಚಲನ
ಪಥಸಂಚಲನದಲ್ಲಿ ಭಾಗವಹಿಸಿದ್ದ ವಿವಿಧ ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನ ನೀಡಲಾಯಿತು. ಮೂರು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಮೂರು ಬಹುಮಾನ ನೀಡಲಾಯಿತು.
ಗ್ಯಾರೆಂಟಿ ಯೋಜನೆಗಳ ವಿಶೇಷ ಪ್ರರ್ದಶನ: ಸರ್ಕಾರದ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮೀ, ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಯುವನಿಧಿ ಯೋಜನೆಯ ಪ್ರರ್ದಶನಗಳು ವಿಶೇಷ ಗಮನ ಸೆಳೆದವು
ಕಾರ್ಯಕ್ರಮದಲ್ಲಿ ಶಾಸಕರಾದ ಸ್ವರೂಪ್ ಪ್ರಕಾಶ್, ನಗರಸಭೆ ಅಧ್ಯಕ್ಷರಾದ ಆರ್. ಮೋಹನ್, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷರಾದ ಈ. ಕೃಷ್ಣೇಗೌಡ ಉಸ್ಥಿತರಿದ್ದರು.