

ಚಿಕ್ಕಮಗಳೂರು: ಸ್ವಾತಂತ್ರ್ಯ ಹೋರಾಟಗಾರರು ವೈಯಕ್ತಿಕ ಸುಖ, ಸಂತೋಷವನ್ನು ತ್ಯಾಗ ಮಾಡಿ, ಸೆರೆಮನೆ ವಾಸ ಅನುಭವಿಸಿದ ಫಲವಾಗಿ ಇಂದು ಸ್ವಚ್ಚಂದವಾಗಿ ಜೀವನ ಸಾಗಿಸುವಂತಾಗಿದೆ. ಅಲ್ಲದೆ ಆ ದೇಶಭಕ್ತರನ್ನು ಸ್ಮರಿಸುವ ಮತ್ತು ಕೃತಜ್ಞತೆ ಸಮರ್ಪಿಸುವ ಸಮಯ ಇದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.</p><p>ನಗರದ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾ ಸ್ವಾತಂತ್ರ್ಯೊತ್ಸವ ಆಚರಣಾ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.
ಸ್ವಾತಂತ್ರ್ಯ್ಕಾಗಿ ಹೋರಾಟವೆಂಬ ಯಜ್ಞದಲ್ಲಿ ಸಮರ್ಪಿಸಿಕೊಂಡ ತ್ಯಾಗಜೀವಿಗಳು ನಮ್ಮ ಹಿರಿಯರು. ಮಹಾತ್ಮ ಗಾಂಧಿ, ಗೋಪಾಲಕೃಷ್ಣ ಗೋಖಲೆ, ಭಗತ್ ಸಿಂಗ್, ಅರವಿಂದ ಘೊಷ್, ಬಾಲಗಂಗಾಧರ ತಿಲಕ್, ವೀರ ಸಾವರ್ಕರ್, ಡಾ. ಬಿ.ಆರ್.ಅಂಬೇಡ್ಕರ್, ಜವಾಹರಲಾಲ್ ನೆಹರು, ಡಾ. ಮೌಲಾನಾ ಅಬುಲ್ ಕಲಾಂ ಆಜಾದ್, ಸುಭಾಷ್ಚಂದ್ರ ಬೋಸ್ ಅವರಂತಹ ಮಹಾನುಭಾವರ ಜತೆಗೆ ನಮ್ಮ ಜಿಲ್ಲೆಯವರೇ ಆದ ಹೊಸಕೊಪ್ಪ ಕೃಷ್ಣರಾಯರು, ಅಣ್ಣಪ್ಪ ಶೆಟ್ಟಿ ಮುಂತಾದ ಹೋರಾಟಗಾರರ ಶುಭಾಕಾಂಕ್ಷೆಗಳಿವೆ. ಇಂದಿಗೂ ನಮ್ಮ ಯೋಧರು ರಾಷ್ಟ್ರದ ರಕ್ಷಣೆಗಾಗಿ ಅವಿರತ ಶ್ರಮ ವಹಿಸುತ್ತಿದ್ದಾರೆ. ಈ ಎಲ್ಲರ ಕೊಡುಗೆಗಳನ್ನು ಸ್ಮರಿಸೋಣ ಎಂದರು.
ಎರಡು ನೂರು ವರ್ಷಗಳ ಕಾಲ ದಾಸ್ಯದ ಸಂಕೋಲೆಯಲ್ಲಿ ನಲುಗಿ ಹೋಗಿದ್ದ ನಮ್ಮ ಪೂರ್ವಜರು ಈ ಒಂದು ಸಂಭ್ರಮದ ಕ್ಷಣ ಅನುಭವಿಸಲು ತಪಸ್ಸು ಮಾಡಿದ್ದರು. ಜೀವನದ ಸಕಲವನ್ನೂ ಧಾರೆ ಎರೆದು ದೇಶದ ಸ್ವಾತಂತ್ರ್ಯ ಹಂಬಲವೊಂದನ್ನೇ ಧ್ಯೇಯವಾಗಿಟ್ಟುಕೊಂಡು ಹಗಲಿರುಳು ಹೋರಾಡಿದ್ದಾರೆ. ಸ್ವಾತಂತ್ರ್ಯನ್ನು ಮೆಲುಕು ಹಾಕಿದರೆ ಅನೇಕ ಸಂಕಷ್ಟ, ಯಾತನೆಗಳೇ ಪ್ರತಿಧ್ವನಿಸುತ್ತವೆ. ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಹೆಮ್ಮೆ ಮತ್ತು ಅಭಿಮಾನದಿಂದ ಆಚರಿಸುತ್ತಿರುವ ಸುಸಂದರ್ಭ ಇದು ಎಂದು ಹೇಳಿದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕ ಸಿ.ಟಿ.ರವಿ, ಸಫಾಯಿ ಕರ್ವಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸದಸ್ಯ ರಾಜು, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಎಸ್ಪಿ ಉಮಾ ಪ್ರಶಾಂತ್, ಜಿಪಂ ಸಿಇಒ ಜಿ.ಪ್ರಭು, ಎಡಿಸಿ ಬಿ.ಆರ್.ರೂಪಾ, ತಹಸೀಲ್ದಾರ್ ವಿನಾಯಕ್ ಸಾಗರ್, ಪೌರಾಯುಕ್ತ ಬಿ.ಸಿ.ಬಸವರಾಜ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ಎಂ.ಆರ್.ದೇವರಾಜ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಇತರರಿದ್ದರು.