ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ಸಂಸ್ಥಾನದ ಪಾತ್ರ ಪ್ರಮುಖ

1111111
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಹೋರಾಟ ಪ್ರಮುಖ ಪಾತ್ರ ವಹಿಸುತ್ತದೆ. ಚನ್ನಮ್ಮನ ಸಾಹಸ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಹಾಗೂ ಕಿತ್ತೂರು ಸಂಸ್ಥಾನ ದಾಖಲೆಗಳ ಶೋಧ- ಅನುವಾದ- ಪ್ರಕಟಣ ಯೋಜನೆ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಎ.ಬಿ. ವಗ್ಗರ ವಿರಚಿತ ‘ಕಿತ್ತೂರು ಸಂಸ್ಥಾನ: ದಾಖಲೆಗಳು ಸಂಪುಟ-2’ನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಜಾನಪದ ಸಾಹಿತ್ಯ, ಲಾವಣಿ ಪದಗಳು ಸೇರಿ ದೇಶಿ ದಾಖಲೆಗಳನ್ನು ಕ್ರೋಢೀಕರಿಸಿ ಕಿತ್ತೂರು ಸಂಸ್ಥಾನದ ಸಮಗ್ರ ಇತಿಹಾಸ ರಚನೆಯಾಗಬೇಕು. ದೇಸಿ ದಷ್ಟಿಕೋನದಿಂದ ವಸ್ತುನಿಷ್ಠ ಇತಿಹಾಸ ರಚನೆ ಮಾಡುವುದು ಅವಶ್ಯಕ ಎಂದರು.
ಡಾ. ಸ್ಮಿತಾ ಸುರೇಬಾನಕರ ಮಾತನಾಡಿ, ಕಿತ್ತೂರು ಚನ್ನಮ್ಮ ಬ್ರಿಟೀಷರ ವಿರುದ್ಧದ ಹೋರಾಟಕ್ಕೆ ಚಾಲನೆ ನೀಡಿದ ಮಹಿಳೆ. ಸೂರ್ಯ ಮುಳುಗದ ಸಂಸ್ಥಾನವನ್ನೇ ಎದುರು ಹಾಕಿಕೊಂಡ ಮಹಿಳೆಯ ಶೌರ್ಯವನ್ನು ಸದಾಕಾಲ ಸ್ಮರಿಸಬೇಕು ಎಂದರು.
ಲೇಖಕ ಡಾ. ಎ.ಬಿ. ವಗ್ಗರ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಎಂ. ವೈ. ಸಾವಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಡಾ. ಬಾಳಣ್ಣ ಶೀಗಿಹಳ್ಳಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net