ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಅಗತ್ಯ

15Rajesh16
Published on

ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮದ ಡಾ.ಬಿ.ಅರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಭಾರತ ಸರ್ಕಾರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಮೇರಾ ಯುವ ಭಾರತ್, ರಂಗಸೌರಭ ಸಹಯೋಗದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ. ದಾನೇಶ್ವರಿ ಉದ್ಘಾಟಿಸಿ ಮಾತನಾಡಿ, ನಮಗೆ ಸ್ವತಂತ್ರ ದೇಶವನ್ನು ನೀಡಲು ಶ್ರಮಿಸಿದ ನಮ್ಮ ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರರ ಮಹಾನ್ ತ್ಯಾಗಗಳನ್ನು ನಾವು ಸ್ಮರಿಸುತ್ತೇವೆ. ಇದರ ಜತೆಗೆ ವಿದ್ಯಾರ್ಥಿನಿಯರು ಧ್ಯಾನದ ಮಹತ್ವವನ್ನು ತಿಳಿದು ಕೊಂಡು ಮನಸ್ಸಿಗೆ ನೆಮ್ಮದಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಾಹಿತಿ ಹಾಗೂ ಗ್ರಾಮ ಆಡಳಿತ ಅಧಿಕಾರಿ ಶ್ರೀಧರ್(ಕೆ.ಸಿರಿ) ಮಾತನಾಡಿ, ನಾವಿಂದು ಹಾರುತ್ತಿರುವ ತ್ರಿವರ್ಣ ಧ್ವಜದ ಕೆಳಗಡೆ ನಿಂತು ಹೃದಯದಲ್ಲಿ ಹೆಮ್ಮೆಯಿಂದ ಕಂಗಳಲ್ಲಿ ಕನಸ್ಸುಗಳೊಂದಿಗೆ ಭಾರತದ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಈ ಸ್ವಾತಂತ್ರ್ಯ ನಮಗೆ ತ್ಯಾಗ ಬಲಿದಾನಗಳ ಜತೆಗೆ ನಮ್ಮ ಜವಾಬ್ದಾರಿಯನ್ನು ಜಾಗೃತಗೊಳಿಸುತ್ತದೆ. ಇಂದಿನ ಮಕ್ಕಗಳು ನಾಳಿನ ನಾಯಕರುಗಳು ಮಾತ್ರವಲ್ಲ, ದೇಶದ ನಿರ್ಮಾತೃಗಳು ಕೂಡಾ ಹೌದು. ನಾವೆಲ್ಲರೂ ಮೂಲಭೂತ ಹಕ್ಕುಗಳನ್ನು ಪಡೆದಿದ್ದೇವೆ. ಹಾಗಾಗಿ ಮೂಲಭೂತ ಕರ್ತವ್ಯವನ್ನು ಸಮರ್ಪಣಾ ಭಾವದಿಂದ ನಿರ್ವಹಿಸಬೇಕಿದೆ ಎಂದು ತಿಳಿಸಿದರು.

ಪ್ರಾಂಶುಪಾಲ ಹೇಮಣ್ಣ ಹಾದಿಮನಿ ಸ್ವಾತಂತ್ರ್ಯಕ್ಕೋಸ್ಕರ ಅನೇಕ ಹೋರಾಟಗಾರರು ತ್ಯಾಗ ಮಾಡಿದ್ದಾರೆ ಅವರನ್ನು ನಾವು ಯಾವಾಗಲೂ ಸ್ಮರಿಸಬೇಕು ಎಂದು ಹೇಳಿದರು. ಉಪ ಪ್ರಾಂಶುಪಾಲ ಜಿ.ನಾಗೇಂದ್ರ ಧ್ವಜರೋಹಣ ನೆರವೇರಿಸಿದರು. ರಂಗಸೌರಭ ಕಾರ್ಯದರ್ಶಿ ಎಸ್. ಗುರುರಾಜು ಪ್ರಾಸ್ತವಿಕ ನುಡಿಗಳನ್ನಾಡಿದರು. ಜನಪದ ಗಾಯಕ ಮಹೇಶ್ ಗೀತಗಾಯನ ನಡೆಸಿಕೊಟ್ಟರು . ವಿದ್ಯಾರ್ಥಿನಿಯರಿಂದ ದೇಶಭಕ್ತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಿ ಪಡಿಸಿದರು. ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣದೊಂದಿಗೆ ಭಾಗವಹಿಸಿ ಗಮನ ಸೆಳೆದರು. ನಂತರ ಗಣ್ಯರಿಂದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಶಿಕ್ಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net