ಸ್ವಾತಂತ್ರ್ಯ ಸೇನಾನಿಗಳನ್ನು ಸದಾಕಾಲ ಸ್ಮರಿಸೋಣ

Published on

ಗುಂಡ್ಲುಪೇಟೆ : ದೇಶಕ್ಕೆ ಸ್ವಾತಂತ್ರ್ಯ ದೊರಕಲು ಹಲವಾರು ಮಹನೀಯರು ತ್ಯಾಗ ಹಾಗೂ ಬಲಿದಾನ ಮಾಡಿದ್ದು ಎಲ್ಲರೂ ಅವರನ್ನು ಸ್ಮರಿಸಬೇಕಾಗಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಪಟ್ಟಣದ ಡಿ.ದೇವರಾಜು ಅರಸು ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಬ್ರಿಟಿಷರ ದಾಸ್ಯದಲ್ಲಿದ್ದ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಹಲವಾರು ಮಹನೀಯರು ಪ್ರಾಣತ್ಯಾಗ ಮಾಡಿದ್ದಾರೆ. ಮಹಾತ್ಮ ಗಾಂಧಿಯವರ ಹೋರಾಟದ ಫಲವಾಗಿ ಸ್ವತಂತ್ರವಾಗಿ ದೇಶ ಇಂದು ಮುನ್ನಡೆಯುತ್ತಿದ್ದು ದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿಕೊಟ್ಟಿದ್ದಾರೆ. ಸೈನಿಕರು ದೇಶದ ಭದ್ರತೆ ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಸ್ವಾತಂತ್ರ್ಯ ಸೇನಾನಿಗಳನ್ನು ಸದಾಕಾಲ ಸ್ಮರಿಸಬೇಕಾಗಿದೆ ಎಂದು ಹೇಳಿದರು.

ತಹಸೀಲ್ದಾರ್ ಎಂ.ಎಸ್.ತನ್ಮಯಿ ಧ್ವಜಾರೋಹಣ ನೆರವೇರಿಸಿದರು. ಅಣ್ಣೂರುಕೇರಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ರಂಗೇಗೌಡ ಸ್ವಾಂತಂತ್ರ್ಯ ಹೋರಾಟದ ಇತಿಹಾಸ ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪೌರಕಾರ್ಮಿಕರು. ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಆಕರ್ಷಕ ಪರೇಡ್ ನಡೆಸಿ ಮೆಚ್ಚುಗೆ ಗಳಿಸಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಹಲವು ದೇಶ ಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಲಾಯಿತು. ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಣ್ಮುಗ, ಸರ್ಕಲ್ ಇನ್‌ಸ್ಪೆಕ್ಟರ್ ಜಯಕುಮಾರ್, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸತೀಶ್, ಪುರಸಭೆ ಅಧ್ಯಕ್ಷ ಜಿ.ಎಸ್.ಮಧುಸೂದನ್, ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಮುಖ್ಯಾಧಿಕಾರಿ ಶರವಣ, ಸದಸ್ಯರಾದ ಶಶಿಧರ, ರಾಜಗೋಪಾಲ ಸೇರಿದಂತೆ ಪುರಸಭಾ ಸದಸ್ಯರು, ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ, ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಸಾರ್ವಜನಿಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net