ಸ್ವಾತಂತ್ರೃಹೋರಾಟದಲ್ಲಿತ್ತು ದುರ್ಗದ ಶಕ್ತಿ

CTD district minister---0000
Published on

ಚಿತ್ರದುರ್ಗ: ರಾಜ್ಯ ಸರ್ಕಾರ ಅಭಿವೃದ್ಧಿಗೆ ಬದ್ಧವಾಗಿದ್ದು, ಗ್ಯಾರಂಟಿಗಳಿಗೆ ಯಾವುದೇ ಆತಂಕವಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ 78ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಯುವಜನರಿಗೆ ಉದ್ಯೋಗ, ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದ ಗ್ಯಾರಂಟಿಗಳು ಸ್ಥಗಿತಗೊಳ್ಳುವುದಿಲ್ಲ ಎಂದರು.
ಅಬ್ಬಿನಹೊಳಲು ಬಳಿಯ ಸಮಸ್ಯೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಇತ್ಯರ್ಥ ಪಡಿಸಿದ್ದು, ಮುಂದಿನ ಮುಂಗಾರಿನ ಒಳಗೆ ಜಿಲ್ಲೆಗೆ ಭದ್ರಾ ನೀರು ಹರಿಸಲಾಗುವುದು. ವಿವಿ ಸಾಗರಕ್ಕೆ ಪ್ರಸ್ತುತ ಭದ್ರಾಜಲಾಶಯದಿಂದ ನಿತ್ಯ 700 ಕ್ಯೂಸೆಕ್ಸ್ ನೀ ರು ಹರಿಸಲಾಗುತ್ತಿದೆ. ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ವೇದಾವತಿ ನದಿಗೆ ಹರಿಸಿ ಅಲ್ಲಿಂದ ವಿವಿ ಸಾಗರಕ್ಕೆ ನೀರು ತುಂಬಿಸುವ ಪ್ರಸ್ತಾವನೆ ಇದೆ ಎಂದು ಹೇಳಿದರು.
ವಿದ್ಯುತ್ ಉತ್ಪಾದನೆ ನಂತರ ಲಿಂಗನಮಕ್ಕಿ ಜಲಾಶಯದಿಂದ ಸಮುದ್ರಕ್ಕೆ ಹರಿದು ಹೋಗುವ 40 ಟಿಎಂಸಿ ನೀರನ್ನು ಬೆಂಗಳೂರಿಗೆ ಪೂರೈಸುವ ಯೋಜನೆಯಡಿ ಮೊದಲಿಗೆ ವಿವಿ ಸಾಗರದಲ್ಲಿ ನೀರು ಶೇಖರಿಸಿ ನಂತರ ಬೆಂಗಳೂರಿಗೆ ಒಯ್ಯುವ ಕುರಿತಂತೆ ಸಮೀಕ್ಷೆ ಆರಂಭವಾಗಿದೆ ಎಂದರು.
ಬೆಳೆ ಸಮೀಕ್ಷೆಯಲ್ಲಿ ಜಿಲ್ಲೆ, ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಪೂರ್ವ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 1,30,694 ತಾಕುಗಳ ಪೈಕಿ 1,28, 375 ತಾಕುಗಳಲ್ಲಿ ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ. 2023ರ ಮುಂಗಾರು ಹಂಗಾಮಿನಲ್ಲಿ 81501 ರೈತರು 284.22 ಕೋಟಿ ರೂ.ಬೆಳೆ ವಿಮೆ ಪರಿಹಾರ ಪಡೆದಿರುತ್ತಾರೆ. 2024ರ ಮುಂಗಾರಲ್ಲಿ 1,12,101 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿ ದ್ದು, ಜಿಲ್ಲೆ ರಾಜ್ಯದಲ್ಲಿ 8 ನೇ ಸ್ಥಾನದಲ್ಲಿದೆ.
ಚಿತ್ರದುರ್ಗ ಸ್ವಾತಂತ್ರೃಹೋರಾಟಕ್ಕೆ ಶಕ್ತಿ ತುಂಬಿದ ಜಿಲ್ಲೆಯಾಗಿದೆ. ಹೊಸದುರ್ಗ, ಬಾಗೂರು, ಕೊಳಹಾಳು ಸೇರಿದಂತೆ ಜಿಲ್ಲೆಯ ನಾನಾ ಸತ್ಯಾಗ್ರಹ ಕೇಂದ್ರಗಳು ಇದಕ್ಕೆ ಸಾಕ್ಷಿಯಾಗಿವೆ. ತುರುವನೂರು ಜತೆ ಗಾಂಧೀಜಿಗೆ ವಿಶೇಷ ಸಂಬಂಧವಿತ್ತು, ಗಾಂಧೀಜಿ ಸಹಚರ ಮಹದೇವ್ ದೇಸಾಯಿ ತುರುವನೂರಿಗೆ ಭೇಟಿ ಕೊಟ್ಟಿದ್ದರು ಎಂದು ಹೋರಾಟಗಾರರನ್ನು ಸ್ಮರಿಸಿದ ಸಚಿವರು, ಸತ್ಯಾಗ್ರಹ, ಸಂಗ್ರಾಮ ಹಾಗೂ ಸಂವಿಧಾನ ಭಾರತದ ತ್ರಿಶಕ್ತಿಯಾಗಿದೆ ಎಂದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಗೋವಿಂದ ಎಂ.ಕಾರಜೋಳ, ರಾಜ್ಯ ಆದಿ ಜಾಂಬವ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಡಿಸಿ ಟಿ.ವೆಂಕಟೇಶ್, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ, ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್ ಮತ್ತಿತರ ಅಧಿಕಾರಿಗಳು ಇದ್ದರು.
ಡಿಎಆರ್ ಆರ್‌ಪಿಐ ಎಚ್.ಡಿ.ರುದ್ರೇಶ್ ಅವರು ಪರೇಡ್ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದರು. ಪೊಲೀಸ್, ಅರಣ್ಯ, ಗೃಹ ರಕ್ಷಕದಳ, ಎನ್‌ಸಿಸಿ, ಸೌಟ್ಸ್ ಮತ್ತು ಗೈಡ್ ಹಾಗೂ ಶಾಲಾ ವಿದ್ಯಾರ್ಥಿಗಳ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪೊಲೀಸ್ ವಾದ್ಯ ವೃಂದ ಪರೇಡ್‌ಗೆ ಮೆರುಗು ನೀಡಿತು.
ಕೋಟೆ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬಾಪೂಜಿ ಪ್ರೌಢಶಾಲೆ ವಿದ್ಯಾರ್ಥಿಗಳು ಸುರಪುರ ವೆಂಕಟಪ್ಪ ನಾಯಕ ಹಾಗೂ ವಿದ್ಯಾವಿಕಾಸ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ದೇಶದ ಸಾಂಸ್ಕೃತಿಕ ವೈವಿಧ್ಯ ಬಿಂಬಿಸುವ ನೃತ್ಯರೂಪಕಗಳನ್ನು ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net