ಸ್ವಾತಂತ್ರೃದ ಕಿಚ್ಚು ಹೊತ್ತಿಸಿದ್ದ ಶಿವಪುರ

15M.D.R.1
Published on

ಮದ್ದೂರು: ಸ್ವಾತಂತ್ರೊೃೀತ್ಸವದ ಕಿಚ್ಚು ಹೊತ್ತಿಸುವಲ್ಲಿ ಮದ್ದೂರಿನ ಶಿವಪುರ ಇತಿಹಾಸದ ಪುಟಗಳಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ 77ನೇ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶಾದ್ಯಂತ ಸ್ವಾತಂತ್ರ್ಯದ ಕಿಚ್ಚು ಹೊತ್ತಿಕೊಂಡಿದ್ದ ವೇಳೆಯಲ್ಲೇ ಮೈಸೂರು ಸಂಸ್ಥಾನದಲ್ಲೂ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಿದ್ಧತೆ ಆರಂಭವಾಗಿತ್ತು. ನ್ಯಾಯಾಲಯದ ನಿಷೇಧಾಜ್ಞೆ ಇದ್ದರೂ 1938ರ ಏಪ್ರಿಲ್ 9ರಂದು ಮದ್ದೂರಿನ ಶಿವಪುರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶದಲ್ಲಿ ಮತ್ತಷ್ಟು ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಲಾಯಿತು ಎಂದು ಸ್ಮರಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಿ.ಸುರೇಶ್ (ಸೇನೆ ಕ್ಷೇತ್ರ), ಬೋರಾಪುರದ ಶಂಕರೇಗೌಡ (ಸಮಾಜ ಸೇವೆ), ರಂಜಿತ್ ಕುಮಾರ್ ತಗ್ಗಹಳ್ಳಿ (ಕೃಷಿ), ಪಿ.ಆರ್.ಕಾಮಾಕ್ಷಿ ಹೆಮ್ಮನಹಳ್ಳಿ (ರೇಷ್ಮೆ), ವರದರಾಜು ಕೆರೆಮೇಗಳದೊಡ್ಡಿ(ತೋಟಗಾರಿಕೆ), ಮಾಲಗಾರನಹಳ್ಳಿ ಭಾನುಪ್ರಿಯ (ಜಾನಪದ), ದೇಶಹಳ್ಳಿ ದಿವ್ಯಾಶ್ರೀ (ಶಿಕ್ಷಣ ಕ್ಷೇತ್ರ), ಕೂಳಗೆರೆ ತಿಮ್ಮೇಗೌಡ (ಹಿರಿಯ ಸ್ವಾತಂತ್ರ್ಯ ಹೋರಾಟಗಾರ), ಮೆಣಸಗೆರೆ ಎಂ.ಎಸ್.ಶ್ರೀನಿವಾಸ್ ಮೂರ್ತಿ (ಪೂಜಾ ಕುಣಿತ) ಅವರನ್ನು ಸನ್ಮಾನಿಸಲಾಯಿತು.

ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದಿಂದ ಜಾನಪದ ಕಲಾ ತಂಡಗಳು, ವಿವಿಧ ಶಾಲೆಗಳ ಮಕ್ಕಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು.
ತಹಸೀಲ್ದಾರ್ ಎನ್.ನರಸಿಂಹಮೂರ್ತಿ, ತಾಪಂ ಇಒ ಎಲ್.ಸಂದೀಪ್, ಬಿಇಒ ಸಿ.ಎಚ್.ಕಾಳೀರಯ್ಯ, ಇನ್ಸ್‌ಪೆಕ್ಟರ್ ಎಸ್.ಸಂತೋಷ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net