ಸ್ವಾತಂತ್ರೃ ಸೇನಾನಿಗಳನ್ನು ಸ್ಮರಿಸಿಕೊಳ್ಳುವುದು ಕರ್ತವ್ಯ ; ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಲಹೆ ; ಸ್ವಾತಂತ್ರ್ಯ ಚೌಕದಲ್ಲಿ ಗಾಂಧಿ ನುಡಿನಮನ

DSC_8672
Published on

ತುಮಕೂರು: ಕ್ವಿಟ್ ಇಂಡಿಯಾ ಚಳವಳಿಯಲ್ಲಿ ತುಮಕೂರು ಜಿಲ್ಲೆ ಕೂಡ ಮಹತ್ವದ ಪಾತ್ರ ವಹಿಸಿದ್ದು, ಸ್ವಾತಂತ್ರೃ ಸೇನಾನಿಗಳನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

ನಗರದ ಸ್ವಾತಂತ್ರ್ಯ ಚೌಕದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಾಗೂ ದಂಡಿ ಉಪ್ಪಿನ ಸತ್ಯಾಗ್ರಹ ನೆನಪಿನ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ‘ಗಾಂಧಿ ನುಡಿನಮನ’ ಕಾರ್ಯಕ್ರಮದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಉಪ್ಪಿನ ಸತ್ಯಾಗ್ರಹದಲ್ಲಿ ಮುಂದಾಳತ್ವ ವಹಿಸಿದ್ದ ಗಾಂಧಿ ಅವರಿಗೆ ನಮನ ಸಲ್ಲಿಸುವ ಮೂಲಕ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ರಾಷ್ಟ್ರಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಭಾಗವಾಗಿ ಪ್ರತಿ ವಾರವೂ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

2022ರ ಆಗಸ್ಟ್ 15ರಂದು ನಡೆಯುವ ಭಾರತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ 75 ವಾರ ನಿರಂತರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜನರು ಮನೆಯ ಹಬ್ಬದಂತೆ ಆಚರಿಸಬೇಕು. ನಮಗೆ ಸ್ವಾತಂತ್ರೃ ತಂದುಕೊಟ್ಟ ಮಹನೀಯರನ್ನು ಸ್ಮರಿಸಬೇಕು ಎಂದರು.

ಈ ನುಡಿ ನಮನ ಕಾರ್ಯಕ್ರಮದ ಅಂಗವಾಗಿ ಗಾಂಧಿನಮನ, ಶ್ರಮದಾನ, ದೇಶಭಕ್ತಿಗೀತೆ ಗಾಯನ, ಪಾದಯಾತ್ರೆ, ಕಾಲೇಜು ವಿದ್ಯಾರ್ಥಿಗಳಿಂದ ಪ್ರಭಾತ್ ೆೇರಿ, ಉಪನ್ಯಾಸ, ಸ್ವಚ್ಛತೆ ಸೇರಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೇಯರ್ ಬಿ.ಜಿ.ಕೃಷ್ಣಪ್ಪ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಪಾಲಿಕೆ ಆಯುಕ್ತೆ ರೇಣುಕಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಶ್ರೀನಿವಾಸ್, ಡಿಡಿಪಿಯು ನರಸಿಂಹಮೂರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ್ ಮತ್ತಿತರರು ಇದ್ದರು.

ಸ್ವಾತಂತ್ರ್ಯ ಚೌಕದ ಮಹತ್ವ: 1942ರ ಸೆ.14ರಂದು ನಡೆದ ಕ್ವಿಟ್ ಇಂಡಿಯಾ ಚಳವಳಿ ಭಾಗವಾಗಿ ತುಮಕೂರಿನ ಸ್ವಾತಂತ್ರ್ಯ ಚೌಕದಲ್ಲಿ 1000ಕ್ಕೂ ಹೆಚ್ಚು ಜನ ಸೇರಿ ಚಳವಳಿ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಚಳವಳಿಗಾರರ ಮೇಲೆ ಗುಂಡಿನ ದಾಳಿ ನಡೆಸಿದರು. ಈ ಗುಂಡಿನ ದಾಳಿಗೆ ರಾಮಚಂದ್ರ, ಮಂಡಿಪೇಟೆ ಗಂಗಣ್ಣ, ಸಂತೇಪೇಟೆ ನಂಜುಂಡಪ್ಪ ಹುತಾತ್ಮರಾದರು. ಇವರ ಸ್ಮರಣಾರ್ಥ ಸ್ವಾತಂತ್ರ್ಯ ಚೌಕ ನಿರ್ಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net