

ಬೆಳಗಾವಿ: ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳವಳಿಗೆ 80 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸ್ವಾತಂತ್ರ್ಯ ಯೋಧರ ಮನೆಗಳಿಗೆ ತೆರಳಿ ಜಿಲ್ಲಾಡಳಿತದ ಪರವಾಗಿ ಮಂಗಳವಾರ ಸನ್ಮಾನಿಸಿದರು.
ಇಲ್ಲಿನ ರಾಣಿ ಚನ್ನಮ್ಮ ನಗರದ ಹಿರಿಯ ಸ್ವಾತಂತ್ರ್ಯ ಯೋಧ ರಾಜೇಂದ್ರ ಧರ್ಮಪ್ಪ ಕಲಟಗಿ ಹಾಗೂ ಕುವೆಂಪು ನಗರದ ವಿಠ್ಠಲ ಯಾಳಗಿ ಅವರನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಗೌರವಿಸಿದರು.
ಹೋರಾಟದ ದಿನಗಳನ್ನು ಮೆಲುಕು ಹಾಕಿದ ರಾಜೇಂದ್ರ ಕಲಟಗಿ, ಕ್ವಿಟ್ ಇಂಡಿಯಾ ಚಳವಳಿಯ ಮುಂಚೂಣಿಯಲ್ಲಿದ್ದ ಮಹಾತ್ಮ ಗಾಂಧೀಜಿ ದೇಶಕ್ಕೆ ಪ್ರೇರಣೆಯಾಗಿದ್ದರು ಎಂದು ಸ್ಮರಿಸಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯ ಯೋಧರನ್ನು ಭೇಟಿ ಮಾಡಿ ಸನ್ಮಾನಿಸುವ ಅವಕಾಶ ದೊರಕಿರುವುದು ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು. ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ತಹಸೀಲ್ದಾರ್ ಆರ್.ಕೆ.ಕುಲಕರ್ಣಿ ಇದ್ದರು.