ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಮೂಲ್ಯ: ಪಿ. ಕೃಷ್ಣೇಗೌಡ ಹೇಳಿಕೆ

16_HSN_01
Published on

ಹಾಸನ: ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಮೂಲ್ಯವಾಗಿದ್ದು ಅವರನ್ನು ಗೌರವ ಸ್ಥಾನದಲ್ಲಿಡಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಅವರು ಹೇಳಿದರು.

ನಗರದ ಗುರುಭವನದಲ್ಲಿ ಸಾವಿತ್ರಿಬಾಯಿ ಫುಲೆ ಜಿಲ್ಲಾ ಹಾಗೂ ತಾಲೂಕು ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆ ಸಮಾಜದ ಕಣ್ಣು. ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಶ್ರಮ, ತ್ಯಾಗವನ್ನು ಎಲ್ಲರೂ ಸ್ಮರಿಸಬೇಕು. ಶಿಕ್ಷಕ ವೃತ್ತಿಯಲ್ಲಿರುವ ಮಹಿಳೆಯರು ಕುಟುಂಬ ನಿರ್ವಹಣೆ, ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಜತೆಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶಕ್ತಿಮೀರಿ ಶ್ರಮಿಸುತ್ತಾರೆ ಎಂದು ಹೇಳಿದರು.

ಪೂರ್ಣಪ್ರಜ್ಞ ಶಾಲೆಯ ಸಂಸ್ಥಾಪಕ ಲಕ್ಷ್ಮೀಕಾಂತ್ ಮಾತನಾಡಿ, ಮಹಿಳೆಯರು ತಾಳ್ಮೆ, ಸಹನೆ ಹಾಗೂ ಪರಿಶ್ರಮಕ್ಕೆ ಆದರ್ಶ. ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ. ಶಿಕ್ಷಕರ ವೃತ್ತಿ ಅತ್ಯಮೂಲ್ಯವಾಗಿದ್ದು ಅದಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ ಅವರು ಮಾತನಾಡಿ, ಗುರು ಹಿರಿಯರಿಗೆ ಗೌರವ ಕೊಟ್ಟರೆ ಬದುಕಿನಲ್ಲಿ ಯಾವ ಸಮಸ್ಯೆಯೂ ಎದುರಾಗುವುದಿಲ್ಲ. ಒಂದು ವೇಳೆ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದರೆ ಅದರಿಂದ ಪಾರು ಮಾಡಲು ಗುರುಗಳು ಇರುತ್ತಾರೆ ಎಂದರು.

ಸಾವಿತ್ರಿಬಾಯಿ ಫುಲೆ ಸಂಘದ ಜಿಲ್ಲಾಧ್ಯಕ್ಷೆ ಆರ್. ಆಶಾ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಕೃಷ್ಣೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ಮಂಜುಳಾ, ಸಮನ್ವಯಾಧಿಕಾರಿ ಲಿಲ್ಲಿ ಡಯಾನ, ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಲಕ್ಷ್ಮಿಕಾಂತ್, ಗೃಹ ನಿರ್ಮಾಣ ಸಂಘದ ಅಧ್ಯಕ್ಷ ಡಾ. ಶಿವೇಗೌಡ, ನಿವೃತ್ತ ಮುಖ್ಯಶಿಕ್ಷಕಿ ಸರೋಜಮ್ಮ, ಸಾವಿತ್ರಿಬಾಯಿ ಫುಲೆ ಸಂಘದ ತಾಲೂಕು ಅಧ್ಯಕ್ಷೆ ಮೀನಾಕ್ಷಿ, ವೆಂಕಟೇಶ್ ರವೀಂದ್ರ, ಮಹಾಲಕ್ಷ್ಮೀ, ರಾಧಾ, ರತ್ನಮ್ಮ, ಗೀತಾ ಹಾಗು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net