

ಕಮಲನಗರ: ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿರಬೇಕೆಂದು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಮಡಿವಾಳಪ್ಪ ಮುರ್ಕೆ ಹೇಳಿದರು.
ಪಟ್ಟಣದ ಲತಾ ಮಂಗೇಶ್ಕರ್ ಕನ್ಯಾ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ಶಾಲೆ ಮಂಡಳಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಮತ್ತು ಸ್ವಸ್ಥ ಸಂಕಲ್ಪ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮದ್ಯಪಾನ, ಧೂಮಪಾನ ಮುಂತಾದ ದುಶ್ಚಟಗಳಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ, ಆರೋಗ್ಯ ಹಾಗೂ ಮಾನಸಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಾಮಾಜಿಕ ಪಿಡುಗುಗಳನ್ನು ದೂರ ಮಾಡುವ ಮೂಲಕ ಗಾಂಧೀಜಿಯವರ ಕನಸನ್ನು ನನಸಾಗಿಸಬೇಕು. ಪಾನಮುಕ್ತ ದೇಶ ಕಟ್ಟುವಲ್ಲಿ ಸಾಮಾಜಿಕ ಬದಲಾವಣೆ ಮಾಡಬೇಕಾಗಿದೆ ಎಂದರು.
ಶಿಕ್ಷಕ ಬಂಟಿ ರಾಂಪುರೆ ಮಾತನಾಡಿ, ಉತ್ತಮ ಕಾರ್ಯ ಮಾಡಲು ಶುದ್ಧ ಮನಸ್ಸು ಮತ್ತು ಸಕಾರಾತ್ಮಕ ಚಿಂತನೆ ಮುಖ್ಯ. ಪ್ರತಿಯೊಂದು ಕುಟುಂಬವು ಆರ್ಥಿಕ, ಶೈಕ್ಷಣಿಕ, ಆರೋಗ್ಯವಂತ ಇರಬೇಕಾದರೆ ದುಶ್ಚಟ, ದುರಭ್ಯಾಸಗಳಿಂದ ದೂರವಾಗಿರಬೇಕು ಎಂದರು.
ಕಮಲನಗರದ ಭಾಗಿರಥಿ ಪಬ್ಲಿಕ್ ಶಾಲೆ ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಮಾತನಾಡಿ, ಗಾಂಧೀಜಿಯವರ ಕನಸಿನ ರಾಮರಾಜ್ಯ ಕಲ್ಪನೆಯಾದ ಗ್ರಾಮಗಳ ಅಭಿವೃದ್ಧಿಗೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವಿರತವಾಗಿ ಶ್ರಮಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಮದ್ಯವರ್ಜನ ಶಿಬಿರ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ವಸ್ಥ ಸಂಕಲ್ಪ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಉತ್ತಮ ಕಾರ್ಯ ಎಂದರು.
ಶಾಲೆ ಮುಖ್ಯಗುರು ಅನಿಲಕುಮಾರ ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸೂರ್ಯವಂಶಿ, ರಾಜೇಂದ್ರ ಲಸ್ಕರೆ, ದೀಲಿಪ ಸಂತಪುರೆ, ರಮಾಕಾಂತ ಕಣಜೆ, ಶಿಲ್ಪಾ ಬಿರಾದಾರ, ಸರಸ್ವತಿ, ಮೇಲ್ವೀಚಾರಕ ಮಲ್ಲಿಕಾರ್ಜುನ. ಸಿ. , ಸೇವಾ ಪ್ರತಿನಿಧಿ ಮೀನಾಕ್ಷಿ ಹಡಪದ, ಆಶಾ ಪಾಟೀಲ, ಪ್ರಕಾಶ ಮಹಾಜನ, ಸಂಗೀತಾ ಇತರರಿದ್ದರು.