

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಎನ್.ಎಸ್.ಪೂರ್ಣಿಮಾ ಸುಗ್ಗರಾಜು ತಿಳಿಸಿದರು.
ನಗರದ ಪಂಪ್‌ಹೌಸ್‌ನಲ್ಲಿ ನಗರಸಭೆಯಿಂದ ಸ್ವಚ್ಛತೆಯೇ ಸೇವೆ-2024ರ ಸ್ವಭಾವ ಸ್ವಚ್ಛತೆ-ಸಂಸ್ಕಾರ ಸ್ವಚ್ಛತೆ ಕಾರ್ಯಕ್ರಮದಡಿ ಮಂಗಳವಾರ ಆಯೋಜಿಸಿದ್ದ ಬೈಕ್‌ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಸ್ವಚ್ಛತಾ ಕೆಲಸ ದೇವರ ಕೆಲಸ. ಶುಚಿತ್ವ ಕಾರ್ಯವನ್ನು ಪ್ರತಿದಿನ ಮಾಡಬೇಕು. ಸ್ವಚ್ಛತೆಯಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ನಗರದ ಸ್ವಚ್ಛತೆಗೆ ಪೌರಕಾರ್ಮಿಕರು ನಿತ್ಯ ಶ್ರಮಿಸುತ್ತಿದ್ದಾರೆ. ಸ್ವಚ್ಛತೆಯಿಂದ ಹಲವು ಕಾಯಿಲೆಗಳೂ ದೂರವಾಗುತ್ತವೆ. ಆದ್ದರಿಂದ ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡು ಮನೆ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದರು.
ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ, ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಸೆ.17ರಿಂದ ಅ.2ರವರೆಗೆ ಸ್ವಚ್ಛತೆಯೇ ಸೇವೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸ್ವಚ್ಛತಾ ಕಾರ್ಯಕ್ರದಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಉತ್ತೇಜಿಸುವುದು ಆಂದೋಲನದ ಗುರಿಯಾಗಿದೆ. ಸಂಘ-ಸಂಸ್ಥೆಗಳು, ಸಾರ್ವಜನಿಕರು ಅಭಿಯಾನದ ಯಶಸ್ವಿಗೆ ಕೈಜೋಡಿಸಬೇಕು. ಸೆ.17ರಿಂದ ಅ.2ರವರೆಗೂ ನಗರದಲ್ಲಿ ಮುಖ್ಯರಸ್ತೆ, ಉದ್ಯಾನವನ, ದೇವಾಲಯ, ಕಲ್ಯಾಣಿ, ಕೆರೆ ಸೇರಿ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ, ಸ್ತ್ರೀಶಕ್ತಿ ಮಹಿಳೆಯರಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬೈಕ್ ರ‌್ಯಾಲಿ: ಕಾರ್ಯಕ್ರಮ ಪ್ರಯುಕ್ತ ನಗರಸಭೆ ಪಂಪ್‌ಹೌಸ್ ಬಳಿ ಸಮಾವೇಶಗೊಂಡ ನಗರಸಭೆ ಅಧಿಕಾರಿಗಳು, ಚಾಲಕರು, ವಾಟರ್‌ಮನ್ ಸೇರಿ ಪೌರಕಾರ್ಮಿಕರು ನಗರದ ಮುಖ್ಯರಸ್ತೆಯಲ್ಲಿ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೈಕ್ ರ‌್ಯಾಲಿ ನಡೆಸಿದರು. ನಗರಸಭೆ ಉಪಾಧ್ಯಕ್ಷೆ ಸುಜಾತಾ ಮುನಿಯಪ್ಪ, ನಗರಸಭೆ ಅಭಿಯಂತ ಸಾಗರ್, ಆರೋಗ್ಯ ನಿರೀಕ್ಷಕಿ ಬಿ.ಜಿ.ಮಮತಾ, ರವಿಕುಮಾರ್ ಮತ್ತಿತರರು ಉಪಸ್ಥಿತರಿದರು.