

ಗೌರಿಬಿದನೂರು : ಸ್ವ ಸಹಾಯ ಗುಂಪುಗಳು ಉತ್ಪಾದಿಸುವ ಉತ್ಪನ್ನಗಳಿಗೆ ಸರ್ಕಾರ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕೆಂದು ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಆಗ್ರಹಿಸಿದರು.
ಮಹಿಳಾ ಸ್ವಸಹಾಯ ಗುಂಪುಗಳ ಆರ್ಥಿಕ ಚಟುವಟಿಕೆಗೆ ಅನುಕೂಲವಾಗಲೆಂದು ತಾಲೂಕಿನ ಆನೂಡಿಯಲ್ಲಿ ಸಂಜೀವಿನಿ ಕುಟೀರ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಸೀ ಸಬಲೀಕರಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಈ ನಿಟ್ಟಿನಲ್ಲಿ ಸ್ತ್ರೀ ಶಕ್ತಿ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಂಘಗಳು ಉತ್ಪಾದಿಸುವ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಸಂಘಗಳು ಪ್ರಾಮಾಣಿಕತೆ ಹಾಗೂ ನಂಬಿಕೆಯಿಂದ ಕೆಲಸ ಮಾಡಬೇಕು. ಪಡೆದ ಸಾಲವನ್ನು ಉದ್ದೇಶಿತ ಕೆಲಸಗಳಿಗೆ ಮಾತ್ರ ಬಳಸಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ತಾಪಂ ಅಧ್ಯಕ್ಷ ಆರ್. ಲೋಕೇಶ್ ಸಲಹೆ ನೀಡಿದರು.
ತಾಪಂ ಸದಸ್ಯ ನರಸಿಂಹಮೂರ್ತಿ, ಎಪಿಎಂಸಿ ಅಧ್ಯಕ್ಷ ಅಶ್ವತ್ಥ್ ರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಬೊಮ್ಮಣ್ಣ, ಮುಖಂಡರಾದ ಸೇವಾ ನಾಯಕ್, ಅಂಜಿನಪ್ಪ ಇತರರಿದ್ದರು.