ಸ್ವರ್ಣವಲ್ಲೀ ಮಠದಲ್ಲಿ ಶರನ್ನವರಾತ್ರಿ 26ರಿಂದ

12SIRSI2
Published on

ಶಿರಸಿ: ತಾಲೂಕಿನ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಸೆ. 26ರಿಂದ ಅ. 5ರವರೆಗೆ ಶರನ್ನವರಾತ್ರಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಸ್ವರ್ಣವಲ್ಲೀ ಮಠದಲ್ಲಿ ಸೋಮವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶ್ರೀಗಳು ಮಾಹಿತಿ ನೀಡಿದರು. ಸೆ. 26ರಂದು ಬೆಳಗ್ಗೆ 8 ಗಂಟೆಯಿಂದ ಗಣಪತಿ ಪೂಜೆ, ಪುಣ್ಯಾಹ, ಮಹಾಸಂಕಲ್ಪ, ಋತ್ವಿಕ್ ವರಣ ಇತ್ಯಾದಿ ಧಾರ್ವಿುಕ ಕಾರ್ಯಕ್ರಮ ನಡೆಯಲಿವೆ. ಪ್ರತಿದಿನ ಬೆಳಗ್ಗೆ ವಿವಿಧ ಧಾರ್ವಿುಕ ಕಾರ್ಯಕ್ರಮ, ಮಧ್ಯಾಹ್ನ ದುರ್ಗಾಪೂಜೆ ಹಾಗೂ ಮಹಾಮಂಗಳಾರತಿ, ಪ್ರತಿದಿನ ರಾತ್ರಿ ದುರ್ಗಾ ಮಹಾಪೂಜಾ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದರು.

30ರಂದು ಲಲಿತಾ ಪಂಚಮಿ, ಸಂಜೆ ಶತರುದ್ರಾಭಿಷೇಕ ಸಹಿತ ಮಹಾಪೂಜಾ, ಮಹಾಮಂಗಳಾರತಿ, ಅಕ್ಟೋಬರ್ 2ರಂದು ಬೆಳಗ್ಗೆ ಶಾರದಾ ಸ್ಥಾಪನೆ, 3 ರಂದು ದುರ್ಗಾಷ್ಟಮಿ, 4ರಂದು ಮಹಾನವಮಿ, ಲಕ್ಷ್ಮೀ ಪೂಜೆ, ಶ್ರೀಕ್ಷೇತ್ರಪಾಲ ಬಲಿ ಮತ್ತು 5 ರಂದು ವಿಜಯಾದಶಮಿ ನಡೆಯಲಿದೆ. ವಿಜಯ ದಶಮಿಯಂದು ಸಂಜೆ 4.30ಕ್ಕೆ ಶ್ರೀ ಲಕ್ಷ್ಮೀ ನರಸಿಂಹ ದೇವರ ಸೀಮೋಲ್ಲಂಘನ, ಶಮೀ ಪೂಜಾ, ಅಷ್ಟಾವಧಾನ ಸೇವೆ ನಡೆಯಲಿದೆ. ರಾತ್ರಿ 8 ಗಂಟೆಗೆ ಮಹಾಮಂಗಳಾರತಿ, ವಿವಿಧ ಸೇವೆ, ಆಶೀರ್ವಚನ, ಫಲಮಂತ್ರಾಕ್ಷತೆ ಪ್ರದಾನ ನಡೆಯಲಿದೆ ಎಂದು ಶ್ರೀಗಳು ತಿಳಿಸಿದರು.

6ರಂದು ಶ್ರೀ ನವಚಂಡಿ ಹೋಮ ಮತ್ತು ಶ್ರೀ ಲಕ್ಷ್ಮೀ ನರಸಿಂಹ ಮಂತ್ರ ಹವನ ಪೂರ್ಣಾಹುತಿ, ಮಹಾಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿದೆ. ಜತೆಗೆ ಪ್ರತಿದಿನ ಸಂಜೆ 6.30 ರಿಂದ 8ರವರೆಗೆ ಸೇವಾ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದರು.

ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ವ್ಯವಸ್ಥಾಪಕ ಎಸ್.ಎನ್. ಗಾಂವಕರ ಬೆಳ್ಳಿಪಾಲ, ಶ್ರೀಗಳ ಆಪ್ತ ಕಾರ್ಯದರ್ಶಿ ಸಿಂಧೂರ ಭಟ್ಟ ಇದ್ದರು.

ನದಿ ಜೋಡಣೆ ಡಿಪಿಆರ್ ರದ್ದು ಮಾಡಲಿ: ನದಿ ಜೋಡಣೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಯೋಜನೆ ಮುಂದುವರಿಸುವುದಿಲ್ಲ ಎಂಬ ಭರವಸೆಯಿದೆ. ಡಿಪಿಆರ್ ರದ್ದು ಮಾಡುವುದು ಯೋಗ್ಯವಾಗಿದೆ. ಅದರ ಬಗ್ಗೆ ಆಗ್ರಹವಿದೆ. ನಮ್ಮ ಆಶಯ ನಮ್ಮ ಜಿಲ್ಲೆಯ ಶಾಸಕರು ಸದನದಲ್ಲಿ ಒತ್ತಾಯ ಮಾಡಲಿ. ಈಗ ಅಧಿವೇಶನ ನಡೆಯುತ್ತಿದ್ದು, ಏನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net