ಸ್ವರ್ಣಗೌರಿಗೆ ಅಗ್ರಪೂಜೆ

30 yelandur 04
ಕುದೇರು ಗ್ರಾಮದ ಸ್ವರ್ಣಗೌರಿ ದೇವಾಲಯ.
Published on

ಯಳಂದೂರು: ಜಿಲ್ಲೆಯಲ್ಲಿ ಗೌರಿಹಬ್ಬ ಆಚರಣೆಯಲ್ಲಿ ಕುದೇರು ಗ್ರಾಮ ಅತ್ಯಂತ ಪ್ರಸಿದ್ಧಿ ಪಡೆದಿದೆ. ಗ್ರಾಮದಲ್ಲಿ ಗೌರಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಂಗಳವಾರ ಗೌರಿಯನ್ನು ಪ್ರತಿಷ್ಠಾಪಿಸಲಾಯಿತು.


ಗೌರಿಹಬ್ಬದಿಂದ 12 ದಿನಗಳವರೆಗೂ ಗ್ರಾಮದಲ್ಲಿ ಹಬ್ಬ ಆಚರಣೆ ನಡೆಯುತ್ತದೆ. ವಿಶೇಷ ಪೂಜಾ ವಿಧಾನಗಳು ನಡೆಯುತ್ತವೆ. ಗ್ರಾಮದಲ್ಲಿ ಗೌರಮ್ಮನಿಗೆ ಅಗ್ರಸ್ಥಾನವಿದೆ. ಗ್ರಾಮದ ಹೃದಯಭಾಗದಲ್ಲಿರುವ ದೊಡ್ಡಕೆರೆಯ ತಡಿಯಲ್ಲಿ ಮರಳಿನಿಂದ ನಿರ್ಮಿಸಿದ ಗೌರಿ ವಿಗ್ರಹವನ್ನು ಸಿದ್ಧಪಡಿಸಿ ವಿಶೇಷ ಪೂಜೆಗಳೊಂದಿಗೆ ಅಲಂಕರಿಸಿದ ಗೌರಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಇಟ್ಟು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಬಾಗಿನ ಅರ್ಪಿಸಿ ಸಂಭ್ರಮಿಸಿದರು.


ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಊರಿನ ಮಧ್ಯಭಾಗದಲ್ಲಿರುವ ಸ್ವರ್ಣಗೌರಿ ದೇವಾಯಲಕ್ಕೆ ತಂದು ಮರಳಿನ ಗೌರಿಯನ್ನು ಪುನರ್ ಪ್ರತಿಷ್ಠಾಪಿಸಲಾಗುತ್ತದೆ. ದೇವಾಲಯದಲ್ಲಿ ಐದನೇ ದಿನಕ್ಕೆ ಮರಳಿನ ಗೌರಿಯನ್ನು ಬದಲಿಸಿ ಕಡಲೆ ಹಿಟ್ಟಿನ ಗೌರಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಗೌರಿಗೆ ಚಿನ್ನದ ಕವಚ, ಆಭರಣಗಳನ್ನು ತೊಡಿಸಲಾಗುತ್ತದೆ. ಅಂದಿನಿಂದ 12ನೇ ದಿನದವೆರೆಗೂ ದೇವರ ವಿಗ್ರಹವನ್ನು ಸ್ವರ್ಣಗೌರಿ ಎಂದು ನಾಮಕರಣ ಮಾಡಿ ಪೂಜಿಸುವುದು ಇಲ್ಲಿನ ಸಂಪ್ರದಾಯವಾಗಿದೆ.

ಗೌರಿ- ಗಣೇಶನ ಹಬ್ಬದಲ್ಲಿ ಎಲ್ಲೆಡೆ ಗಣೇಶನಿಗೆ ಅಗ್ರಮನ್ನಣೆ ಸಿಗುತ್ತದೆ. ಆದರೆ ಕುದೇರು ಗ್ರಾಮದಲ್ಲಿ ಗೌರಮ್ಮನಿಗೆ ಮೊದಲ ಪ್ರಾಶ್ಯಸ್ತ್ಯ. ಗೌರಿ ಹಬ್ಬದಲ್ಲಿಯಾದರೂ ಸ್ತ್ರೀಯರಿಗೆ ಪ್ರಾಮುಖ್ಯತೆ ನೀಡಬೇಕೆಂಬ ಸಲುವಾಗಿ 1913ರಲ್ಲಿ ಇಲ್ಲಿ ಗೌರಮ್ಮನ ದೇವಾಲಯವನ್ನು ನಿರ್ಮಿಸಲಾಯಿತು. ಶತಮಾನದ ಇತಿಹಾಸವಿರುವ ಈ ದೇವಾಲಯ ಹೆಂಚಿನ ಮನೆಯಾಗಿತ್ತು. ಈಗ ಸುಂದರ ದೇವಾಲಯ ನಿರ್ಮಾಣವಾಗಿದೆ. ಗೌರಿ ಪೂಜೆಯಿಂದ ಇಷ್ಟಾರ್ಥಗಳು ಸಿದ್ಧಿಯಾಗುತ್ತಿವೆ ಎಂಬ ನಂಬಿಕೆ ಜನರಲ್ಲಿದೆ.

ಗ್ರಾಮದ ಎಲ್ಲ ವರ್ಗದ ಜನರೂ ಸೇರಿ ಹಬ್ಬ ಆಚರಿಸುವುದು ಮತ್ತೊಂದು ವಿಶೇಷ. ಇದು ಸಾಮರಸ್ಯದ ಸಂಕೇತ. ಇಡೀ ಗ್ರಾಮದಲ್ಲಿ ಗೌರಿ- ಗಣೇಶ ವಿಗ್ರಹವನ್ನು ಒಂದೇ ಕಡೆ ಮಾತ್ರ ಪ್ರತಿಷ್ಠಾಪಿಸಲಾಗುತ್ತದೆ. ಗ್ರಾಮದ ಇನ್ನೆಲ್ಲೂ ಗೌರಿ- ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸುವಂತಿಲ್ಲ. 12ನೇ ದಿನಕ್ಕೆ ವಿಜೃಂಭಣೆಯಿಂದ ಮೂರ್ತಿ ವಿಸರ್ಜಿಸಲಾಗುತ್ತದೆ. ನವದಂಪತಿಗಳು ಇಲ್ಲಿ ಭಾಗಿನ ಅರ್ಪಿಸುತ್ತಾರೆ. ಭಕ್ತರು ಹರಕೆಗಳನ್ನು ಪೂರೈಸುತ್ತಾರೆ. ಸ್ವರ್ಣಗೌರಿಯ ದರ್ಶನಕ್ಕಾಗಿ ಬೆಂಗಳೂರು, ಮೈಸೂರು ಸೇರಿದಂತೆ ನಾನಾ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net