ಸ್ವರ್ಣಗೌರಿ ಸ್ವಾಗತಕ್ಕೆ ಜಿಲ್ಲಾದ್ಯಂತ ಮನೆಮಾಡಿದ ಸಡಗರ

Festival
Published on

ಚಿತ್ರದುರ್ಗ: ಶಿವನ ಸತಿ, ಕಾತ್ಯಾಯನೀ, ಶಂಕರಿ, ಹರಭಯಂಕರಿ, ಪಾರ್ವತಿ ಸೇರಿ ಶಕ್ತಿದೇವತೆಯಾದ ಸ್ವರ್ಣಗೌರಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು, ಕೋಟೆನಗರಿ ಸೇರಿ ಜಿಲ್ಲಾದ್ಯಂತ ಬಹು ಉತ್ಸಾಹದಿಂದ ಆಚರಿಸುವ ಸಲುವಾಗಿ ಗುರುವಾರದಿಂದಲೇ ಸಿದ್ಧತೆಗಳು ಭರದಿಂದ ಸಾಗಿದವು. ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಗಳ ಬಳಿ ಬಹುತೇಕರು ಮುಗಿಬಿದ್ದ ದೃಶ್ಯ ವಿವಿಧೆಡೆ ಕಂಡು ಬಂದಿತು.

ವಿವಿಧ ಪುಷ್ಪ, ಹಣ್ಣುಗಳು, ಬಾಳೆ ಎಲೆ, ಮಾವಿನ ಎಲೆ, ಬಾಳೆ ದಿಂಡು ಸೇರಿ ಪೂಜೆಗೆ ಬಳಸುವ ಅಗತ್ಯ ಸಾಮಗ್ರಿಗಳ ಖರೀದಿ ಭರಾಟೆಯೂ ಆನೆಬಾಗಿಲು, ಸಂತೆಹೊಂಡ, ಮೆದೇಹಳ್ಳಿ ಮಾರ್ಗ, ಗಾಂಧಿ ವೃತ್ತ ಸಮೀಪದಲ್ಲಿ ಜೋರಾಗಿ ನಡೆಯಿತು.

ವಸ್ತ್ರೋದ್ಯಮಕ್ಕೂ ಬೇಡಿಕೆ: ಗೌರಿ ಹಬ್ಬದ ಅಂಗವಾಗಿ ನಾರಿಯರ ಸೀರೆಗಳಿಗೆ ಬೇಡಿಕೆ ಹೆಚ್ಚಿತ್ತು. ಗ್ರಾಮೀಣ ಭಾಗದಿಂದ ಅನೇಕರು ನಗರಕ್ಕೆ ಬಂದಿದ್ದರು. ಗ್ರಾಹಕರು ಸದಭಿರುಚಿಗೆ ತಕ್ಕಂತೆ ತಮಗಿಷ್ಟವಾದುದ್ದನ್ನು ಖರೀದಿಸಲು ಮುಂದಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಟ್ಟೆ ಅಂಗಡಿಗಳಲ್ಲೂ ಜನಸಂದಣಿ ಇದ್ದ ಕಾರಣ ವಸ್ತ್ರೋದ್ಯಮಕ್ಕೂ ಬೇಡಿಕೆ ಕಂಡುಬಂದಿತು.

ಹಬ್ಬಗಳಲ್ಲಿ ಟ್ರಾಫಿಕ್ ಸಮಸ್ಯೆ ಕಾರಣಕ್ಕೆ ಕೆಲ ಸಮಯ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬೆಳಗ್ಗೆಯಿಂದ ಸಂಜೆಯವರೆಗೂ ಜನದಟ್ಟಣೆ ಮುಂದುವರಿಯಿತು.

ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆ ವಿವಿಧ ಬಗೆಯ ಪುಷ್ಪಗಳ ರಾಶಿಯಿಂದ ಭರ್ತಿಯಾಗಿತ್ತು. ಖರೀದಿಗಾಗಿ ಬೆಳಗ್ಗೆ 11ರಿಂದ ಸಂಜೆ 4ರ ವರೆಗೂ ಒಳಗೆ ಪ್ರವೇಶಿಸಲು ಇಕ್ಕಟ್ಟಿನ ವಾತಾವರಣ ನಿರ್ಮಾಣವಾಗಿತ್ತು.

ತಲಾ ಒಂದು ತೆಂಗಿನಕಾಯಿ 20 ರೂ.ಗಳಿಂದ 30 ರೂ., ಗರಿಕೆ ಪತ್ರೆ ಜೋಡಿ 20 ರೂ., ವಿಳ್ಯೆದೆಲೆ ತಲಾ ಒಂದು ಕಟ್ಟಿಗೆ 150 ರೂ., ಮಾವಿನ ಎಲೆ ಜೋಡಿ 50 ರೂ.ವರೆಗೂ ಮಾರಾಟವಾದವು. ಸೇಬು, ಬಾಳೆ ಹಣ್ಣು, ಬಿಕ್ಕೆ ಹಣ್ಣು, ಮೋಸುಂಬಿ, ದ್ರಾಕ್ಷಿ ಕ್ರಮವಾಗಿ 150ರಿಂದ 180 ರೂ., 100ರಿಂದ 120 ರೂ., 80 ರೂ., 70 ರೂ., 150 ರೂ.ನಂತೆ ಮಾರಾಟವಾದವು.

ಅಲಂಕಾರಿಕ ವಸ್ತುಗಳು ವಿಶೇಷವಾಗಿ ಮಹಿಳೆಯರ ಗಮನ ಸೆಳೆದಿದ್ದರಿಂದ ಖರೀದಿಯಲ್ಲಿ ನಿರತರಾದರು.

ಸಾಮೂಹಿಕ ವ್ರತಾಚರಣೆ ಇಂದು: ದೊಡ್ಡಗರಡಿ ಸಮೀಪದ ಗೌರಿ ಮನೆ, ನೀಲಕಂಠೇಶ್ವರ ಸ್ವಾಮಿ ದೇಗುಲ, ಪಿ ಅಂಡ್ ಟಿ ಕ್ವಾಟ್ರಸ್‌ನ ಸಂಕಷ್ಟಹರ ಗಣಪತಿ ದೇಗುಲ, ಸೇರಿ ಸಾಮೂಹಿಕವಾಗಿ ಪ್ರತಿಷ್ಠಾಪಿಸಿದೆಡೆ ಸಾವಿರಾರು ಮಹಿಳೆಯರು ತೆರಳಿ ಗೌರಮ್ಮ ದೇವಿಗೆ ಸೆ. 6ರಂದು ಪೂಜೆ ಸಲ್ಲಿಸಲಿದ್ದಾರೆ.

ಸೇವಂತಿ ದರ ದಿಢೀರ್ ಏರಿಕೆ: ಹೂವಿನ ಮಾರುಕಟ್ಟೆಯಲ್ಲಿ ಗುಣಮಟ್ಟದ ಹಳದಿ, ಬಿಳಿ, ಕೆಂಪು, ನೇರಳೆ, ನೀಲಿ ಸೇರಿ ವಿವಿಧ ವರ್ಣದ ಸೇವಂತಿ 10ರಿಂದ 12 ಮಾರು ಪುಷ್ಪಕ್ಕೆ ತಲಾ 1,000 ರೂ. ಇದೇ ದರಕ್ಕೆ ಕನಕಾಂಬರ ಮತ್ತು ಕಾಕಡ 12 ಮಾರು, ವಿವಿಧ ವರ್ಣಗಳ ಗುಲಾಬಿ (ಬಟನ್ಸ್) ಹೂಗಳು ಕೆ.ಜಿಗೆ 300 ರೂ.ಗೆ ಮಾರಾಟವಾದವು. ಶನಿವಾರ ಗಣೇಶ ಚತುರ್ಥಿ ಇರುವ ಕಾರಣ ಶುಕ್ರವಾರವೂ ಹೂವಿನ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net