

ಗೋಕರ್ಣ: ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು ಎನ್ನುವುದು ಶ್ರೀ ರಾಮ ದೇವರ ವಾಣಿ. ಶ್ರೀರಾಮ ಮೊದಲು ಅಡಿಯಿಟ್ಟು ಪವಿತ್ರ ಉಸಿರನ್ನು ಬೆರೆಸಿ ನಮ್ಮನ್ನು ಹರಸಿದ ಅಯೋಧ್ಯೆಯಲ್ಲಿ ಸಂಕಲ್ಪಿತ ಮಂದಿರ ನಿರ್ವಣವಾಗುವ ಮೂಲಕ ಅಯೋಧ್ಯೆ ಸ್ವರ್ಗಕ್ಕಿಂತ ಶ್ರೇಷ್ಠ ಸ್ಥಾನ ಪಡೆದಂತಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಮಹಾಅಭಿಯಾನವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಭಾರತ ದೇಶಕ್ಕೆ ಅಚ್ಛೇ ದಿನ ಬಂದಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ವಣವಾಗುವುದನ್ನು ಕಣ್ಣಾರೆ ನೋಡುವ ಸುಯೋಗ ನಮ್ಮ ಹಿಂದಿನವರಿಗಿಲ್ಲ. ನಮ್ಮ ಮುಂದಿನವರಿಗೂ ಇಲ್ಲ. ಅದು ನಮಗೆ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ. ಲಾಲ್ಕೃಷ್ಣ ಅಡ್ವಾನಿಯವರು ತಮ್ಮ ಅಪೂರ್ವ ರಥಯಾತ್ರೆ ಮೂಲಕ ಮಂದಿರ ನಿರ್ಮಾಣ ಅಭಿಯಾನಕ್ಕೆ ಚಾಲನೆಯಿತ್ತು ಐತಿಹಾಸಿಕ ದಾಖಲೆ ಬರೆದರು. ಮೂರು ದಶಕಗಳಿಗೂ ಹಿಂದೆ ಅವರು ಬರೆದ ಈ ದಾಖಲೆ ಈಗ ಪರಿಪೂರ್ಣವಾಗುವ ಯೋಗ ಪಡೆಯುವಂತಾಯಿತು. ಮಂದಿರ ನಿರ್ವಣಕ್ಕಾಗಿ ದೇಶವಾಸಿಗಳು ಶಕ್ತ್ಯಾನುಸಾರ ನಿಧಿ ಸಮರ್ಪಣೆ ಮಾಡಿ ಈ ಪುಣ್ಯ ಪರ್ವದಲ್ಲಿ ಭಾಗಿಗಳಾಗಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಮಂದಿರ ನಿರ್ವಣಕ್ಕೆ ಶ್ರೀರಾಮಚಂದ್ರಾಪುರ ಮಠ ಮತ್ತು ಶ್ರೀಮಹಾಬಲೇಶ್ವರ ಮಂದಿರದ ವತಿಯಿಂದ ಶ್ರೀಗಳು ತಲಾ ಒಂದು ಲಕ್ಷ ರೂ. ನಿಧಿ ಸಮರ್ಪಿಸುವ ಘೊಷಣೆ ಮಾಡಿದರು.
ರಾಯಚೂರು ಮುದಗಲ್ಲ ಮಠದ ಶ್ರೀ ಮಹಾಂತ ಸ್ವಾಮೀಜಿ ಉಪಸ್ಥಿತರಿದ್ದರು.
ಪ್ರಾಂತ ಪ್ರಚಾರಕ ಸುಧಾಕರ ಜೀ ಮಹಾಅಭಿಯಾನದ ಬಗ್ಗೆ ವಿವರಿಸಿದರು. ಜಿಲ್ಲಾ ಸಂಘಚಾಲಕ ಹನುಮಂತ ಶಾನಭಾಗ, ವಿಭಾಗ ಸೇವಾ ಪ್ರಮುಖ ಡಾ. ಸುರೇಶ ಹೆಗಡೆ ನಿರ್ವಹಿಸಿದರು.