ಸ್ವರೂಪ್ ಪರ ಸಂಸದ ಪ್ರಜ್ವಲ್ ರೇವಣ್ಣ ಬೃಹತ್ ಬೈಕ್ ಮೆರವಣಿಗೆ

ಸ್ವರೂಪ್ ಪರ ಸಂಸದ ಪ್ರಜ್ವಲ್ ರೇವಣ್ಣ ಬೃಹತ್ ಬೈಕ್ ಮೆರವಣಿಗೆ
Published on

ಹಾಸನ:  ಸಂಸದ ಪ್ರಜ್ವಲ್ ರೇವಣ್ಣ ಅವರು ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಪಿ. ಸ್ವರೂಪ್ ಅವರ ಪರವಾಗಿ ಭಾನುವಾರ ಬೃಹತ್ ಬೈಕ್ ರ‌್ಯಾಲಿ ನಡೆಸಿದರು. ನಗರದ ಕೈಗಾರಿಕಾ ಪ್ರದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಬೈಕ್ ಸವಾರರು ಭಾಗವಹಿಸಿ ನಗರದಾದ್ಯಂತ ಸಂಚರಿಸುವ ಮೂಲಕ ಗಮನ ಸೆಳೆದರು.
ಹಾಸನದ ಕೈಗಾರಿಕೆ ಪ್ರದೇಶದಿಂದ ಆರಂಭವಾದ ಬೈಕ್ ರ‌್ಯಾಲಿ ಚನ್ನಪಟ್ಟಣ, ಹೊಸ ಬಸ್ ನಿಲ್ದಾಣ ರಸ್ತೆ, ಬಿ.ಎಂ. ರಸ್ತೆ, ಹೌಸಿಂಗ್ ಬೋರ್ಡ್, ಸಹ್ಯಾದ್ರಿ ಸರ್ಕಲ್, ವಿವೇಕ ನಗರ, ವಲ್ಲಬಾಯಿ ರಸ್ತೆ, ವಿಜಯನಗರ, ಸಂಗಮೇಶ್ವರ ಬಡಾವಣೆ , ರಾಜ್ ಕುಮಾರ್ ನಗರ ಸೇರಿದಂತೆ ವಿವಿಧೆಡೆ ರ‌್ಯಾಲಿ ಸಂಚರಿಸಿ ಸ್ವರೂಪ್ ಪರ ಮತಯಾಚನೆ ಮಾಡಿದರು.
ಕಳೆದ ಎರಡು ದಿನಗಳ ಹಿಂದೆ ಶಾಸಕ ಪ್ರೀತಂಗೌಡ ಬೈಕ್ ರ‌್ಯಾಲಿ ನಡೆಸಿದ ಬೆನ್ನಲ್ಲೇ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಅವರು ಸಹ ಬೃಹತ್ ಬೈಕ್ ರ‌್ಯಾಲಿ ನಡೆಸಿದ್ದು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ಜೋರಾಗಿಯೇ ನಡೆಯುತ್ತಿದೆ.
ಇನ್ನು ಮತದಾನಕ್ಕೆ ಕೇವಲ ಎರಡು ದಿನಗಳು ಮಾತ್ರವೇ ಬಾಕಿ ಉಳಿದಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇದರ ನಡುವೆಯೇ ವಿವಿಧ ರಾಜಕೀಯ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಮತದಾರರ ಒಲವು ಯಾರ ಕಡೆ ಇದೆ ಎಂಬುದು ಮೇ 13ರಂದು ತಿಳಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net