ಸ್ವಯಂವರ ಪಾರ್ವತಿ ಯಾಗಕ್ಕೆ ಉತ್ತಮ ಸ್ಪಂದನೆ

12 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ಮ್ಯಾಟ್ರಿಮೊನಿ ಸಹಯೋಗದಲ್ಲಿ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24*7 ಸುದ್ದಿವಾಹಿನಿ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಸ್ವಯಂವರ ಪಾರ್ವತಿ ಯಾಗ’ಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ನಡೆದ ಯಾಗದಲ್ಲಿ ಭಾಗಿಯಾಗಿದ್ದ ನೂರಾರು ಭಾವಿ ವಧು- ವರರು ‘ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು’ ಆಶೀರ್ವಾದ ಪಡೆದು ಧನ್ಯತಾಭಾವದಿಂದ ಮರಳಿದರು. ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಕಾರವಾರ ಸೇರಿ ವಿವಿಧ ಜಿಲ್ಲೆಗಳ ಜನರು ಪಾಲ್ಗೊಂಡು ದೈವಿ ಕೃಪಗೆ ಪಾತ್ರರಾದರು.
ಯಾಗವು ವೈದಿಕರ ಪೌರೋಹಿತ್ಯದಲ್ಲಿ ವ್ಯವಸ್ಥಿತವಾಗಿ ನೆರವೇರಿತು. ಸ್ವಯಂವರ ಪಾರ್ವತಿ ಯಾಗದಿಂದ ಭಾವಿ ವಧು-ವರರ ವಿವಾಹಕ್ಕೆ ಇರುವ ತೊಂದರೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಈ ತೊಡಕು ನಿವಾರಣೆಗೆ ವೇದಬ್ರಹ್ಮಶ್ರೀ ಶ್ರೀರಾಮಭಟ್ ಪುರೋಹಿತ ನೇತೃತ್ವದಲ್ಲಿ ಋತ್ವಿಜರಾದ ವೇದಬ್ರಹ್ಮಶ್ರೀ ಶ್ರೀಪಾದ ಭಟ್ ಪುರೋಹಿತ, ವೇದಬ್ರಹ್ಮಶ್ರೀ ಮಾಣಿಕ್ ಜೋಶಿ, ವೇದಬ್ರಹ್ಮಶ್ರೀ ಮನೋಜ ಕುಲಕರ್ಣಿ, ವೇದಬ್ರಹ್ಮಶ್ರೀ ಗುರುನಾಥ ಭಟ್ ಜೋಶಿ ಅವರು ಸ್ವಯಂವರ ಪಾರ್ವತಿ ಯಾಗ ನಡೆಸಿಕೊಟ್ಟರು.
ಜಾತಕ ದೋಷ ಹಾಗೂ ಪೂರ್ವಜನ್ಮದ ಕರ್ಮಫಲದಿಂದ ಬಂದಿರುವ ದೋಷಗಳ ನಿವಾರಣೆಗಾಗಿ ನವಗ್ರಹ ಶಾಂತಿ ಪೂರ್ವಕ ಸ್ವಯಂವರ ಪಾರ್ವತಿ ಯಾಗ ಮಹತ್ವ ಪಡೆದಿದೆ. ಬೆಳಗ್ಗೆ 9 ಗಂಟೆಗೆ ಪ್ರಥಮ ವಂದಿತ ಗಣೇಶನ ಪೂಜೆಯೊದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಪುಣ್ಯಾಹ ವಾಚನ, ನವಗ್ರಹ ಶಾಂತಿ, ಸ್ವಯಂವರ ಪಾರ್ವತಿ ಮಂತ್ರ ಆವಾಹನೆ ಜರುಗಿತು. ಮಧ್ಯಾಹ್ನ 12.30ರ ಸುಮಾರಿಗೆ ಪೂರ್ಣಾಹುತಿ, ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು. ಯಾಗದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರಿಗೂ ಪ್ರಸಾದ ಹಾಗೂ ಆಸಕ್ತರಿಗೆ ಕಂಕಣ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net