

ಹಾಸನ :ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಸ್ವಯಂ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸುವಂತೆ ನಗರಸಭೆ ಆಯುಕ್ತ ಸತೀಶ್ ಕುಮಾರ್ ಕರೆ ನೀಡಿದರು.
ನಗರದ ಕಟ್ಟಿನಕೆರೆ ಮಾರುಕಟ್ಟೆಯ ಆವಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ನಗರಸಭೆ ಕಾರ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜುಲೈ 1 ರಿಂದ 28ರ ವರೆಗೂ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಅಭಿಯಾನ ಪೋಸ್ಟರ್ ಬಿಡುಗಡೆ ಮಾಡುವುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ ಅವರು, ಪ್ಲಾಸ್ಟಿಕ್ ಬಳಕೆ ಮಾಡಬಾರದೆಂದು ನಾವು ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಕೆಲ ಅಂಗಡಿಗಳಲ್ಲಿ, ಬಟ್ಟೆ ಅಂಗಡಿಗಳಲ್ಲಿ ದಿನಸಿ ಅಂಗಡಿ, ನಮಗೆ ಗೊತ್ತಿಲ್ಲದಾಗೆ ಬಳಕೆ ಮಾಡುತ್ತಿರುವುದು ಬೇಸರದ ಸಂಗತಿ. ದಯಮಾಡಿ ಯಾರೂ ಕೂಡ ಪ್ಲಾಸ್ಟಿಕ್ ಬಳಸದೇ ನಮ್ಮ ಜತೆ ಸಹಕರಿಸಿದರೆ ಮುಂದಿನ ಪೀಳಿಗೆಗೆ ಆರೋಗ್ಯಕರ ವಾತಾವರಣ ಉಂಟು ಮಾಡಬಹುದು ಎಂದು ಹೇಳಿದರು.
ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಣೆ ಹಾಗೂ ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಮತ್ತು ವೈಜ್ಞಾನಿಕ ಕಸ ವಿಲೇವಾರಿ ಮಾಡಲಾಗುತ್ತಿದೆ. ಈಗ ಇನ್ನೊಂದು ಹೆಜ್ಜೆಯನ್ನು ಮುಂದಿರಿಸಲು ಹಾಸನ ನಗರಸಭೆ ಮುಂದಾಗಿದೆ. ಅದುವೇ ಪ್ಲಾಸ್ಟಿಕ್ ಬಳಕೆಯ ನಿಷೇಧ ಅನುಷ್ಠಾನ. ದೈನಂದಿನ ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಪರಿಸರಕ್ಕೆ ಹಾನಿ ಉಂಟಾಗುವುದರ ಜತೆಗೆ ಮನುಷ್ಯರು, ಪ್ರಾಣಿ-ಪಕ್ಷಿಗಳ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇಷ್ಟೇ ಅಲ್ಲದೇ ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಚರಂಡಿಗಳು, ಮೋರಿಗಳು ಮತ್ತು ಒಳಚರಂಡಿಗಳಲ್ಲಿ ನೀರಿನ ಸರಾಗ ಹರಿವಿಗೆ ತಡೆ ಉಂಟು ಮಾಡಿ, ನಗರ ಪ್ರದೇಶಗಳಲ್ಲಿನ ಜಲ ಮೂಲಗಳ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಸ್ವಯಂಪ್ರೇರಿತವಾಗಿ ಎಲ್ಲರೂ ಪ್ಲಾಸ್ಟಿಕ್ ಬಳಿಕೆ ನಿಲ್ಲಿಸಿದೆ ಅದು ನಮಗೂ ಹಾಗೂ ನಮ್ಮ ಮುಂದಿನ ಪೀಳಿಗೆಗೂ ಅನುಕೂಲವಾಗುತ್ತದೆ ಎಂದು ಹೇಳಿದರು.
ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು-2016 ಹಾಗೂ ತಿದ್ದುಪಡಿ ನಿಯಮಗಳು-2021 ಅನ್ವಯ ಪ್ಲಾಸ್ಟಿಕ್ ನಿಷೇಧ ನಿಯಮಗಳನ್ನು ಜಾರಿಗೊಳಿಸಲು ಅಧಿಸೂಚನೆಯನ್ನು ಹೊರಡಿಸಿದೆ. ತ್ಯಾಜ್ಯ ಉತ್ಪಾದನೆ ತಯಾರಕರು, ಬ್ಯಾಂಡ್ ಮಾಲೀಕರು, ಪ್ಲಾಸ್ಟಿಕ್ ನಿರ್ವಹಣೆದಾರರಿಗೆ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿಗದಿಪಡಿಸಿ ಅದರಂತೆ ನಿಯಮ ಪಾಲಿಸಲು ಸೂಚಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಕ ಮಾಡುತ್ತಿರುವುದು ಕಂಡು ಬಂದರೆ ಮೊದಲ ಬಾರಿಗೆ ಒಂದು ರೀತಿಯ ದಂಡ, ಎರಡನೇ ಬಾರಿ ಅವರೆ ಪ್ಲಾಸ್ಟಿಕ್ ಬಳಸುವುದು ಕಂಡು ಬಂದರೇ ಹೆಚ್ಚಿನ ದಂಡ ವಿಧಿಸಲಾಗುವುದು. ಅನಿರೀಕ್ಷಿತ ಪರಿಶೀಲನೆ ಸಂದರ್ಭದಲ್ಲಿ ಕಂಡು ಬಂದ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗುವುದು ಹಾಗೂ 3ನೇ ಬಾರಿ ನಿಯಮ ಉಲ್ಲಂಘಿಸಿದವರಿಗೆ ದಂಡದ ಜತೆಗೆ ಉದ್ದಿಮೆ ಪರವಾನಗಿಯನ್ನು ರದ್ದು ಪಡಿಸಲಾಗುವುದು. ಇದನ್ನರಿತು ಯಾರು ಪ್ಲಾಸ್ಟಿಕ್ ಬಳಕೆ ಮಾಡಬಾರದು. ಹಾಸನ ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ನಗರವನ್ನು ಸ್ವಚ್ಛ, ಸುಂದರ ಹಾಗೂ ನೈರ್ಮಲ್ಯದಿಂದ ಕಾಪಾಡಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ಎಲ್ಲರೂ ಸಂಕಲ್ಪಿತರಾಗಲು ಇಂದಿನಿಂದಲೇ ಪ್ರಯತ್ನಿಸೋಣ ಮತ್ತು ಅದರಂತೆ ನಡೆಯೋಣ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯ ನವೀನ್ ಕುಮಾರ್, ಪರಿಸರ ಅಧಿಕಾರಿ ವೆಂಕಟೇಶ್, ನಗರಸಭೆ ಆರೋಗ್ಯಾಧಿಕಾರಿಗಳಾದ ಮಂಜುನಾಥ್, ಚೇತನ್, ಪ್ರಸನ್ನ, ವರ್ತಕರ ಸಂಘದ ಅಧ್ಯಕ್ಷ ಆನಂದ್, ಚಂದ್ರಶೇಖರ್, ಹಿರಿಯ ಕಲಾವಿದ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.