ಸ್ವಯಂಪ್ರೇರಿತ ಬಂದ್​ಗೆ ನಿರ್ಧಾರ

25 lxr 3
Published on

ಲಕ್ಷ್ಮೇಶ್ವರ: ತಾಲೂಕಿನ ಮಾಡಳ್ಳಿ ಗ್ರಾಮದಲ್ಲಿ ಮೂವರಲ್ಲಿ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ರಸ್ತೆ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ.

ಗ್ರಾಮದಲ್ಲಿ ಹೋಟೆಲ್​ಗಳನ್ನು 15 ದಿನಗಳ ಕಾಲ ಬಂದ್ ಮಾಡಲು ಮತ್ತು ದಿನಸಿ ಅಂಗಡಿಗಳ ವ್ಯಾಪಾರದ ವೇಳೆಯನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.

ಗ್ರಾಮದ ಒಂದು ಕುಟುಂಬದಲ್ಲಿ ಮೂವರಿಗೆ ಸೋಂಕು ಕಂಡುಬಂದಿದ್ದು ಜನರು ಆತಂಕಕ್ಕೀಡಾಗಿದ್ದಾರೆ. ಆತಂಕ ದೂರ ಮಾಡುವ ನಿಟ್ಟಿನಲ್ಲಿ ಗ್ರಾಪಂ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಮಾಲೋಚನೆ ಸಭೆಯನ್ನು ಶನಿವಾರ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಗ್ರಾಪಂ ಆಡಳಿತಾಧಿಕಾರಿ ಕೃಷ್ಣಪ್ಪ ಧರ್ಮರ, ಕರೊನಾದಿಂದ ಪ್ರಾಣಾಪಾಯ ಸಂಭವಿಸುವುದಿಲ್ಲ. ಇದು ಸಾಂಕ್ರಾಮಿಕವಾಗಿದ್ದರೂ ಮುಂಜಾಗ್ರತೆ ವಹಿಸಿದರೆ ವೈರಾಣು ಬಾಧಿಸದು. ಯಾರೊಬ್ಬರೂ ಭಯಪಡುವ ಅಗತ್ಯವಿಲ್ಲ ಎಂದರು.

ಗ್ರಾಪಂ ಪಿಡಿಒ ಎಂ.ಎನ್. ಮಲ್ಲೂರ, ಪಿ.ಎಸ್. ಹೂಗಾರ, ಅಲ್ಲಾಭಕ್ಷಿ ನದಾಫ್, ನಾರಾಯಣಗೌಡ ಪಾಟೀಲ, ಗೋವಿಂದಗೌಡ ಪಾಟೀಲ, ಮಂಜುನಾಥ ದೊಡ್ಡಮನಿ, ಪ್ರಕಾಶ ಬಳೂಟಗಿ, ವಿ.ವಿ. ಮತ್ತೂರ ಹಾಗೂ ಆರೋಗ್ಯ ಇಲಾಖೆ, ಅಂಗನವಾಡಿ, ಆಶಾ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net