ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ

14 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜೀವಗಳನ್ನು ಉಳಿಸುವಲ್ಲಿ ರಕ್ತದಾನ ಶ್ರೇಷ್ಠ. ಯುವಕರು ಸ್ವಯಂ ಪ್ರೇರಿತ ರಕ್ತದಾನ ಮಾಡಲು ಮುಂದಾಗಬೇಕು ಎಂದು ಎಸ್‌ಡಿಎಂ ವಿವಿ ಉಪ ಕುಲಪತಿ ಡಾ. ನಿರಂಜನಕುಮಾರ ಹೇಳಿದರು.
ನಗರದ ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ರಕ್ತ ಭಂಡಾರ ವಿಭಾಗದಿಂದ ಬುಧವಾರ ಏರ್ಪಡಿಸಿದ್ದ ವಿಶ್ವ ರಕ್ತ ದಾನಿಗಳ ದಿನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜನ್ಮದಿನದ ಸವಿನೆನಪಿಗೆ ಎಲ್ಲರೂ ರಕ್ತದಾನ ಮಾಡುವ ಅಭ್ಯಾಸ ರೂಡಿಸಿಕೊಳ್ಳಬೇಕು. ನಿಗದಿತ ಸಮಯಕ್ಕೆ ರಕ್ತ ನೀಡಿ ಎಸ್‌ಡಿಎಂ ರಕ್ತ ಭಂಡಾರವು ಸಾವಿರಾರು ಜೀವಗಳನ್ನು ಉಳಿಸಿದ್ದು ಸ್ಮರಣೀಯ ಎಂದರು.
ಸತತ 65ನೇ ಬಾರಿ ರಕ್ತದಾನ ಮಾಡಿದ ಸುಚಿತ ಅಂಗಡಿ ಮಾತನಾಡಿ, ರಕ್ತದಾನಿಗಳ ಆರೋಗ್ಯ ತಪಾಸಣೆ ನಂತರವೇ ರಕ್ತ ಪಡೆಯಲಾಗುತ್ತದೆ. ದಾನಿಗಳು ಯಾವಾಗಲೂ ಇತರರಿಗೆ ಸಹಾಯ ಮಾಡುವ ಉದ್ದೇಶ ಹೊಂದಿರಬೇಕು. ನಮ್ಮ ರಕ್ತ ಬೇರೆ ಊರಿನ ರೋಗಿಗಳಿಗೆ ಸಹಾಯವಾಗುತ್ತದೆ. ಎಸ್‌ಡಿಎಂ ಆಸ್ಪತ್ರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿದೆ. ನಮ್ಮ ತಂಡ ರಕ್ತದಾನಕ್ಕೆ ಸದಾ ಸಿದ್ಧ ಎಂದರು.
ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ವಿಜಯಲಕ್ಷ್ಮೀ ಮಾತನಾಡಿದರು. ಡಾ. ನಿರಂಜನಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನಕುಮಾರ ರಕ್ತ ದಾನಿಗಳನ್ನು ಸನ್ಮಾನಿಸಿದರು.
ಡಾ. ವಿದ್ಯಾ ಸ್ವಾಗತಿಸಿದರು. ಡಾ. ಶಿವಾನಿ ಮತ್ತು ಡಾ. ಐಶ್ವರ್ಯಾ ನಿರೂಪಿಸಿದರು. ಡಾ. ಲಕ್ಷ್ಮೀದೇವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net