ಸ್ವಯಂ ಉದ್ಯೋಗದಿಂದ ಸ್ತ್ರೀಯರ ಸ್ವಾವಲಂಬಿ ಬದುಕು ಸಾಧ್ಯ:ಶಾಸಕ ಸ್ವರೂಪ್ ಪ್ರಕಾಶ್

ಸ್ವಯಂ ಉದ್ಯೋಗದಿಂದ ಸ್ತ್ರೀಯರ ಸ್ವಾವಲಂಬಿ ಬದುಕು ಸಾಧ್ಯ:ಶಾಸಕ ಸ್ವರೂಪ್ ಪ್ರಕಾಶ್
Published on

ಹಾಸನ: ಸ್ವಯಂ ಉದ್ಯೋಗದಿಂದ ಮಹಿಳೆಯರ ಸ್ವಾವಲಂಬಿ ಬದುಕು ಹಾಗೂ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಶಾಸಕ ಸ್ವರೂಪ ಪ್ರಕಾಶ್ ಹೇಳಿದರು.

ಹಾಸನ ತಾಲೂಕಿನ ದೇವರಕೊಪ್ಪಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ, ಜೀವನೋಪಾಯ ಸಂವರ್ಧನ ಸಂಸ್ಥೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸ್ವ ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿದ್ದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಸಂಜೀವಿನಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಸೀಮಿತ ಎಂಬ ಕಾಲ ಈಗ ಮರೆಯಾಗಿದೆ. ಮಹಿಳೆಯರು ಕೂಡ ಪುರುಷರಂತೆ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ಹೈನುಗಾರಿಕೆ, ಸ್ವಯಂ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿಯೂ ಉತ್ತಮ ಸ್ಥಾನಮಾನ ಗಳಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಿಕೊಡಲು ಆಗಾಗ ಮಾರಾಟ ಮೇಳ ಆಯೋಜಿಸಲು ಸರ್ಕಾರದಿಂದ ನಿಯಮಗಳಿವೆ. ಈ ನಿಟ್ಟಿನಲ್ಲಿ ಸರಿಯಾದ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಗಿರೀಶ್ ಮಾತನಾಡಿ, ಮಹಿಳಾ ಒಕ್ಕೂಟದ ಸದಸ್ಯರು ಮನೆಯಲ್ಲೇ ಹಲವು ಉತ್ಪನ್ನಗಳನ್ನು ಉತ್ಪಾದನೆ ಮಾಡುತ್ತಾರೆ. ಆದರೆ ಅವರಿಗೆ ವ್ಯಾಪಾರಕ್ಕೆ ಉತ್ತಮ ವೇದಿಕೆ ಇಲ್ಲದಿರುವುದನ್ನು ಮನಗಂಡು ಸರ್ಕಾರ ಉತ್ತಮ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮುಂದಾಗಿದೆ ಎಂದರು.

ಶಾಸಕರ ಸಹಕಾರದಿಂದ 17.5 ಲಕ್ಷ ರೂ. ಅನುದಾನದಲ್ಲಿ ಈಗಾಗಲೇ ಸಂಜೀವಿನಿ ಭವನ ಉದ್ಘಾಟನೆ ಮಾಡಲಾಗಿದೆ. ಇದು ಮಹಿಳಾ ಸಹಕಾರ ಸಂಘಗಳ ಸದಸ್ಯರು ಉತ್ಪಾದಿಸುವ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಹಾಸನ ತಾಲೂಕಿನಲ್ಲಿ 6 ಭವನಗಳನ್ನು ಹಾಸನ ತಾಲೂಕು ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದ್ದು ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೊಂದು ಭವನ ನಿರ್ಮಾಣ ಮಾಡಲು ಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನರೇಗಾ ಸಹಾಯಕ ನಿರ್ದೇಶಕರಾದ ದಿನೇಶ್, ಎಇಇ ಪುರುಷೋತ್ತಮ್, ವೇಣುಗೋಪಾಲ್, ಒಕ್ಕೂಟದ ಅಧ್ಯಕ್ಷರಾದ ಸವಿತಾ. ಗ್ರಾಮದ ಮುಖಂಡರಾದ ಶಾಂತೇಗೌಡ, ಕೃಷ್ಣೇಗೌಡ, ಬೆಟ್ಟೇಗೌಡ, ಗೋವಿಂದರಾಜು, ಗ್ರಾಮ ಪಂಚಾಯಿತಿ ಪಿಡಿಒ ಶಿವಾನಂದ್, ಕಾರ್ಯದರ್ಶಿ ಕೃಷ್ಣೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net