ಸ್ವಯಂ ಉದ್ಯೋಗದಿಂದ ಮಹಿಳೆಯರು ಸಬಲರಾಗಲಿ

mysore
Published on

ಮೈಸೂರು: ಮಹಿಳೆಯರು ಸ್ವಯಂ ಉದ್ಯೋಗದಿಂದ ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಎಸ್.ಪಿ. ಎಂಟರ್‌ಪ್ರೈಸಸ್ ವತಿಯಿಂದ ಮೈಸೂರು ತಾಲೂಕಿನ ಜಯಪುರ ಹೋಬಳಿಯ ಹಾರೋಹಳ್ಳಿಯಲ್ಲಿ ಆಯೋಜಿಸಿದ್ದ ಹೊಲಿಗೆ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಮಹಿಳೆಯರು ದುಡಿದರೆ ಸಮಾಜಕ್ಕೆ ಅನುಕೂಲವಾಗುತ್ತದೆ. ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಗ್ರಾಮಾಂತರ ಪ್ರದೇಶದ ಜನರಿಗೆ ಅನುಕೂಲ ಮಾಡಬೇಕು ಎಂದು ಸಲಹೆ ನೀಡಿದರು.

ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎನ್ನುವುದನ್ನು ಇತಿಹಾಸದ ದಿನಗಳಿಂದಲೂ ನೋಡಿಕೊಂಡು ಬಂದಿದ್ದೇವೆ. ಮತ್ತೊಬ್ಬರನ್ನು ಅವಲಂಬಿಸದೆ ಸ್ವಂತ ಕಾಲಿನ ಮೇಲೆ ನಿಂತು ಸಾಧಿಸಬೇಕು. ಮಹಿಳೆಯು ಆರ್ಥಿಕವಾಗಿ ದುಡಿದು ಕುಟುಂಬವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಬಲ್ಲೆ ಎನ್ನುವ ಗುರಿ ಇಟ್ಟುಕೊಂಡು ಸಾಗಿದರೆ ಸಫಲವಾಗುವುದು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಿಳೆಯರ ಪರವಾಗಿ ಕಾನೂನು ತಂದರು. ಮಹಿಳೆಯರಿಗೆ ಸ್ಥಾನಮಾನ, ಸ್ವಾತಂತ್ರ್ಯ ಸಿಗುವಂತೆ ಮಾಡಿದರು. ಇಂದು ಗ್ರಾಮಾಂತರ ಪ್ರದೇಶಗಳಲ್ಲಿ ಮಹಿಳೆಯರಿಗೆ ಉದ್ಯೋಗ ಸಿಗುವುದು ಕಷ್ಟ. ಹೀಗಾಗಿ, ಸ್ವಯಂ ಉದ್ಯೋಗಕ್ಕೆ ಬೇಕಾದ ತರಬೇತಿ ಪಡೆದುಕೊಳ್ಳಬೇಕು ಎಂದರು.

ನಗರ ಪ್ರದೇಶದಲ್ಲಿ ಮೊದಲು ಸಿಟಿ ಮಹಿಳೆಯರು ಕೆಲಸ ಮಾಡುತ್ತಿದ್ದರು. ಇಂದು ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲಿ ಹಳ್ಳಿಯವರು ಇದ್ದಾರೆ. ಅದೇ ರೀತಿ ಬೇರೆ ಬೇರೆ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಕಂಪನಿಯವರೇ ಮನೆಯ ಮುಂದಕ್ಕೆ ಬಂದು ಆರ್ಡರ್ ಕೊಡುತ್ತಾರೆ. ಇದರಿಂದಾಗಿ ಮನೆಯಲ್ಲೇ ಸಂಪಾದನೆ ಮಾಡಬಹುದು ಎಂದರು.

ಎಸ್.ಪಿ.ಎಂಟರ್‌ಪ್ರೈಸಸ್‌ನ ಹಾರೋಹಳ್ಳಿ ಸುರೇಶ್, ಪ್ರಿಯಾಂಕ ಸುರೇಶ್, ಗ್ರಾಪಂ ಅಧ್ಯಕ್ಷ ರೇವಣ್ಣ, ನಟರಾಜು, ಅಶೋಕ್, ಕುಮಾರ್, ಮತ್ತಿತರರು ಇದ್ದರು.

ಶೀಘ್ರದಲ್ಲೇ ಹಳ್ಳಿಗಳಿಗೆ ನೀರು

ಜಯಪುರ ಹೋಬಳಿಯ ಪ್ರತಿಯೊಂದು ಗ್ರಾಮಕ್ಕೂ ನದಿ ಮೂಲದಿಂದ ನೀರು ಕೊಡಿಸಲಾಗುವುದು ಎಂದು ಜಿ.ಟಿ.ದೇವೇಗೌಡ ಹೇಳಿದರು. ಮುಂದಿನ 30-40 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಕಬಿನಿ, ಹಳೆಯ ಉಂಡುವಾಡಿ ಯೋಜನೆ ಆರಂಭಿಸಲಾಗಿದೆ. ಈಗಾಗಲೇ ಕಾಮಗಾರಿ ಶುರುವಾಗಿದೆ. ಮುಂದೆ ಪ್ರತಿ ಮನೆಗೂ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net