

ಕೊಳ್ಳೇಗಾಲ: ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಆದ್ದರಿಂದ ಉದ್ಯೋಗಾಕಾಂಕ್ಷಿಗಳು ಸರ್ಕಾರಿ ಮತ್ತು ಖಾಸಗಿ ಉದ್ಯೋಗಕ್ಕೆ ಮಾತ್ರ ಪ್ರಯತ್ನಿಸದೆ, ಸ್ವಯಂ ಉದ್ಯೋಗದತ್ತಲೂ ಹೆಚ್ಚು ಒತ್ತು ನೀಡಬೇಕು ಎಂದು ವಾಟಾಳು ಸೂರ್ಯಸಿಂಹಾಸನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.
ನಗರದ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಬಿ.ರಾಚಯ್ಯ ಪ್ರತಿಷ್ಠಾನದ ವತಿಯಿಂದ ಭಾನುವಾರ ಆಯೋಜಿಸಿದ್ದ ಉದ್ಯೋಗ ಮೇಳ ಉದ್ದೇಶಿಸಿ ಮಾತನಾಡಿದರು.
ಮಾಜಿ ರಾಜ್ಯಪಾಲ ದಿವಂಗತ ಬಿ.ರಾಚಯ್ಯ ಅವರು ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರಿಗೆ ಅಚ್ಚುಮೆಚ್ಚಿನವರಾಗಿದ್ದರು. ಶ್ರೀಗಳು ಅವರನ್ನು ಬಹಳ ವಿಶ್ವಾಸದಿಂದ ಕಾಣುತ್ತಿದ್ದರು. ತಮ್ಮ ವಾಹನದಲ್ಲೇ ಕರೆದೊಯ್ಯುತ್ತಿದ್ದರು. ಅಂತಹ ಶ್ರೇಷ್ಠ ರಾಜಕಾರಣಿ ಬಿ.ರಾಚಯ್ಯ. ಅಂಥವರ ಹೆಸರಲಿ ಉದ್ಯೋಗ ಮೇಳ ಹಾಗೂ ಇನ್ನಿತರ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಚಾರ ಎಂದರು.
ಎ.ಆರ್.ಕೃಷ್ಣ ಮೂರ್ತಿ ಲಕ್ಷ ಮತಗಳ ಅಂತರದಲ್ಲಿ ಗೆಲ್ಲಲಿ: ದಿ. ಬಿ.ರಾಚಯ್ಯ ಅವರ ಪುತ್ರ ಎ.ಆರ್.ಕೃಷ್ಣಮೂರ್ತಿ ಉತ್ತಮ ರಾಜಕಾರಣಿ. ಹಿಂದೆ ಅವರು ಕೇವಲ 1 ಮತದ ಅಂತರದಿಂದ ಸೋತು ಬಹಳ ನೋವು ಅನುಭವಿಸಿದ್ದಾರೆ. ಆದರೂ ಧೃತಿಗೆಡದೆ ನಿರಂತರವಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಆ 1 ಮತದ ಸೋಲಿನ ನೋವು ಹೋಗಬೇಕಾದರೆ ಅವರು ಮುಂಬರುವ ಚುನಾವಣೆಯಲ್ಲಿ 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಬೇಕಿದೆ ಎಂದು ಶ್ರೀಗಳು ಹೇಳಿದರು.
ಈ ಹಿಂದೆ ಒಮ್ಮೆ ಆರ್.ಧ್ರುವನಾರಾಯಣ್ ಅವರು ನನ್ನ ಜತೆ ಮಾತನಾಡುತ್ತ, ಒಮ್ಮೆ ಸೋತಿದ್ದಕ್ಕೆ ನನಗೆ ಬಹಳ ನೋವಾಗಿದೆ. ಆದರೆ ಕೇವಲ 1 ಮತದಿಂದ ಸೋತಿದ್ದ ಎಆರ್‌ಕೆ ಅವರಿಗೆ ಎಷ್ಟು ನೋವಾಗಿದ್ದಿರಬಹುದೆಂದು ಮರುಗಿದ್ದರು ಎಂದು ಸ್ಮರಿಸಿದರು. ಅಧಿಕಾರ ಇರಲಿ, ಇಲ್ಲದಿರಲಿ ಎ.ಆರ್.ಕೃಷ್ಣಮೂರ್ತಿ ನಿರಂತರವಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಸರ್ಕಾರಿ ಬ್ಯಾಕ್‌ಲಾಕ್ ಹುದ್ದೆಗಳು ಖಾಲಿ ಇವೆ. ಆದರೆ, ನಿಯೋಜನೆ ಮಾಡುವ ಕೆಲಸವಾಗುತ್ತಿಲ್ಲ. ಸರ್ಕಾರಗಳು ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವಲ್ಲಿ ವಿಫಲವಾಗಿವೆ. 25 ವರ್ಷಗಳಿಂದ ಬಿ.ರಾಚಯ್ಯ ಪ್ರತಿಷ್ಠಾನದ ವತಿಯಿಂದ ಆರೋಗ್ಯ ಸೇವೆ, ಉದ್ಯೋಗ ಮೇಳ, ತರಬೇತಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ. ಮುಂದೆಯೂ ಮಾಡುತ್ತೇನೆ. ನಿರುದ್ಯೋಗಿಗಳು ಹುಟ್ಟೂರಲ್ಲೇ ಕೆಲಸ ಬೇಕೆಂದು ಕುಳಿತರೆ ಕಷ್ಟವಾಗುತ್ತದೆ. ಬೆಂಗಳೂರು, ಮೈಸೂರು ಕಡೆಗೂ ಮುಖ ಮಾಡಬೇಕು. ಉದ್ಯೋಗ ಮೇಳದಲ್ಲಿ ಉನ್ನತ ಕಂಪನಿಗಳು ಭಾಗವಹಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
2 ಕೋಟಿ ಉದ್ಯೋಗ ಭರವಸೆ ಹುಸಿ: ಶಾಸಕ ಆರ್.ನರೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ ಅದು ಹುಸಿ ಆಯಿತು. ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಶಿಕ್ಷಕಿತರು ಕೆಲಸಕ್ಕಾಗಿ ಅಲೆದಾಡುವ ಪರಿಸ್ಥಿತಿ ಇದೆ. ಸರ್ಕಾರ ಏನನ್ನೂ ಮಾಡಲು ಸಾಧ್ಯವಾಗಿಲ್ಲ. ಇಂತಹ ಸಂದಿಗ್ಧತೆಯಲ್ಲಿ ಜಿಲ್ಲೆಯ ಯುವಕ, ಯುವತಿಯರ ಅನುಕೂಲಕ್ಕೆ ಬಿ.ರಾಚಯ್ಯ ಅವರ ಹೆಸರಲ್ಲಿ ಕೃಷ್ಣಮೂರ್ತಿ ಅವರು ಉದ್ಯೋಗ ಮೇಳ ಅಯೋಜಿಸಿರುವುದು ಸ್ವಾಗತಾರ್ಹ. ಬಿ.ರಾಚಯ್ಯ ಅವರು ಶಾಸಕರಾಗಿ, ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವರಾಗಿ, ರಾಜ್ಯಪಾಲರಾಗಿ ಅನೇಕ ಜನಪರ ಕೆಲಸ ಮಾಡಿ ದೇಶದಲ್ಲೇ ಹೆಸರು ಮಾಡಿದ್ದಾರೆ. ಅವರ ಹಾದಿಯಲ್ಲಿ ಎ.ಆರ್.ಕೆ ಕೆಲಸ ಮಾಡುತ್ತಿದ್ದಾರೆ ಎಂದರು.
ಮಾಜಿ ಶಾಸಕ ಎಸ್.ಜಯಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಂಟೇಶ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ ಮಧುವನಹಳ್ಳಿ, ನಗರಸಭೆ ಅಧ್ಯಕ್ಷೆ ಸಿ.ಎನ್. ರೇಖಾ ರಮೇಶ್, ಉಪಾಧ್ಯಕ್ಷೆ ಸುಶೀಲಾ ಶಾಂತರಾಜು, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ವೆಂಕಟೇಶ್ ಮೂರ್ತಿ, ಖಲೀಂ ಉಲ್ಲಾ, ಕೊಪ್ಪಳಿನಾಯಕ, ಯೋಗೇಶ್, ಜಿ.ಎನ್.ಲೋಕೇಶ್ ಇದ್ದರು.
.