

ಹಾಸನ: ನಾನು ಯಾವುದೇ ಸಭೆ ಮಾಡುವುದಿಲ್ಲ. ಅವರು ಸಭೆ ಆಯೋಜನೆ ಮಾಡಿ ಕರೆದರೆ ನಾನು ಬರುತ್ತೇನೆ. ಕಾರ್ಯಕರ್ತರ ಸಭೆ ಮಾಡಿ ಎಂದು ಸಿಎಂ ಮತ್ತು ನಮ್ಮ ಪಕ್ಷದ ಅಧ್ಯಕ್ಷರು ಹೇಳಬೇಕು. ಇವರೆಲ್ಲಾ ಹೇಳಿದ ಹಾಗೆ ನಾನು ಕೇಳುವುದಿಲ್ಲ. ಇವರೆಲ್ಲಾ ನನಗೆ ಲೆಕ್ಕಕ್ಕೆ ಇಲ್ಲ ಎಂದು ಮಾಜಿ ಸಚಿವ ಬಿ.ಶಿವರಾಂ ವಿರುದ್ಧ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಗುಡುಗಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರು ತಮ್ಮನ್ನು ಕಡೆಗಣಿಸುತ್ತಿದ್ದಾರೆ ಮತ್ತು ಮುಖಂಡರು, ಕಾರ್ಯಕರ್ತರ ಸಭೆ ಮಾಡಿಲ್ಲ ಎಂಬ ಶಿವರಾಂ ಆರೋಪದ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು ನಾನು ಸಭೆ ಮಾಡುವುದಿಲ್ಲ ಏನೀಗ? ಮಾಡಬೇಕು ಅಂತ ರೂಲ್ಸ್ ಇದೆಯಾ? ಎಂದು ಪ್ರಶ್ನೆ ಮಾಡಿದರು.
ಯಾರೋ ಆರೋಪ ಮಾಡುತ್ತಿದ್ದಾನೆ. ಅವನು ಆ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿರಲಿಲ್ಲವೇ? ಅವನೇ ಅವನ ಕ್ಷೇತ್ರದಲ್ಲಿ ಸಭೆ ಆಯೋಜಿಸಿ ನನ್ನನ್ನು ಆಹ್ವಾನಿಸಲಿ ಹೋಗುತ್ತೇನೆ. ನಾನೇ ಹೋಗಿ ಸಭೆ ಸೇರಿಸಿ ವೇದಿಕೆ ಮೇಲೆ ಕೂರಿಸಿ ಹೂವಿನ ಹಾರ ಹಾಕುವುದು ನನ್ನ ಕೆಲಸ ಅಲ್ಲ ಎಂದು ಗರಂ ಆದರು.
ನೀತಿಗೆಟ್ಟವರು ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ಟೀಕೆಗೂ ಪ್ರತಿಕ್ರಿಯಿಸಿದ ಅವರು, ನೀತಿಗೆಟ್ಟವರು ಯಾರು ಎಂದು ಚುನಾವಣೆಯಲ್ಲಿ ಜನ ತೋರಿಸಿದ್ದಾರೆ. ಇದನ್ನು ನಾನು ಹೇಳಬೇಕಾ? ಸರಿ- ತಪ್ಪು ತೀರ್ಮಾನ ಮಾಡುವುದು ಜನ ಅಲ್ಲವೇ? ನಾನು ಯಾವ ಶಿವರಾಂ, ಯಾರಿಗೂ ಕೇರ್ ಮಾಡುವುದಿಲ್ಲ ಎನ್ನುವ ಮೂಲಕ ಮಾಜಿ ಸಚಿವರ ಬಿ. ಶಿವರಾಂ ವಿರುದ್ಧ ಕೆಂಡಾಮಂಡಲರಾದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರ್‌ಎಸ್‌ಎಸ್ ಸಿದ್ಧಾಂತದಿಂದ ಬಂದವರು. ಅವರಿಗೆ ಕಾಂಗ್ರೆಸ್ ಒಗ್ಗಲಿಲ್ಲ ಎಂದು ಮರಳಿ ಬಿಜೆಪಿಗೆ ಹೋಗಿದ್ದಾರೆ. ಅವರು ಹೋಗುವಾಗಲೂ ‘ಕಾಂಗ್ರೆಸ್ ಪಕ್ಷ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ಅವಕಾಶ, ಗೌರವ ಎಲ್ಲವನ್ನೂ ನೀಡಿದೆ. ಆದರೆ, ನಾನು ಮೋದಿ ಅವರನ್ನು ಮತ್ತೆ ಪ್ರಧಾನ ಮಂತ್ರಿ ಮಾಡಬೇಕು ಎಂದು ಬಿಜೆಪಿಗೆ ಮರಳಿದ್ದೇನೆ,’ ಎಂದಿದ್ದಾರೆ. ಹಾಗಾಗಿ ಅವರ ಮೇಲೆ ವೈಯಕ್ತಿಕ ಆರೋಪ ಮಾಡುವುದಿಲ್ಲ ಎಂದರು.
ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಮಂತ್ರಿ ಮಾಡದೇ ಅನ್ಯಾಯ ಮಾಡಿತು ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜಣ್ಣ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಶೆಟ್ಟರ್ ಅವರನ್ನೇಕೆ ಮಂತ್ರಿ ಮಾಡಲಿಲ್ಲ. ರಾಜಕೀಯಕ್ಕಾಗಿ ಹೀಗೆಲ್ಲಾ ಹೇಳಬಾರದು ಎಂದರು. ಲಕ್ಷ್ಮಣ್ ಸವದಿ ಕೂಡ ಬಿಜೆಪಿ ಸೇರುತ್ತಾರೆ ಎನ್ನುವ ಬಗ್ಗೆ ನಾನು ಸವದಿ ಅವರೊಂದಿಗೆ ನಿನ್ನೆ ಮಾತನಾಡಿದ್ದೇನೆ. ಲಕ್ಷ್ಮಣ್ ಸವದಿ ಈಸ್ ಮೈ ಗುಡ್ ಫ್ರೆಂಡ್. ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ ಎಂದು ಸವದಿ ಹೇಳಿದ್ದಾರೆ ಎಂದು ತಿಳಿಸಿದರು.
ನಾನು ಕೂಡ ರಾಮ ಭಕ್ತ. ನಾವು ಪೂಜೆ ಮಾಡುವುದು ದಶರಥ ರಾಮನನ್ನು. ಮೋದಿ ರಾಮನನ್ನಲ್ಲ. ಮೋದಿ ಅವರು ರಾಮನ ಹೆಸರು ಹೇಳುವುದು ಓಟಿಗಾಗಿ ನನ್ನ ಕ್ಷೇತ್ರದಲ್ಲಿ 2004ರಲ್ಲಿ 15 ಲಕ್ಷ ಹಣ ನೀಡಿ ರಾಮ ಮಂದಿರ ಕಟ್ಟಿಸಿದ್ದೆ. ನನ್ನ ಹೆಂಡತಿಯ ಮನೆ ದೇವರು ರಾಮ. ರಾಮ, ವಿಷ್ಣುವಿನ ದಶಾವತಾರಗಳಲ್ಲಿ ಒಂದು. ರಾಮನ ಪೂಜೆ ಮಾಡಲು ಯಾರಿಂದಲೂ ಹೇಳಿಸಿಕೊಳ್ಳಬೇಕಿಲ್ಲ. ಗಾಂಧೀಜಿ ಸಾಯುವುವಾಗ ‘ಹೇ ರಾಮ’ ಅಂದರಲ್ಲ ಅದು ನಮ್ಮ ರಾಮ. ಗೋಡ್ಸೆ ಕೂಡ ರಾಮ ಭಕ್ತನೆ. ಈಗ ಮೆರೆಸುತ್ತಿರುವ ರಾಮ ಭಕ್ತ. ನಾವು ಆ ರಾಮನ ಭಕ್ತರಲ್ಲ ಎಂದು ಹೇಳಿದರು.