

ಚಿಕ್ಕಬಳ್ಳಾಪುರ : ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವ ಮೂಲಕ ಸ್ವಪಕ್ಷೀಯ ಅಭ್ಯರ್ಥಿಯ ಸೋಲಿಗೆ ಕಾರಣರಾದ ಕಾಂಗ್ರೆಸ್‌ನ 7 ಸದಸ್ಯರನ್ನು ಪಕ್ಷವು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದೆ.
ಈ ಮೂಲಕ ಕೈ ಕೊಟ್ಟು ಕಮಲ ಅರಳಿಸಿದವರಿಗೆ ನಿರೀಕ್ಷಿಸದ ಅಸ ಪ್ರಯೋಗವಾಗಿದೆ.
ಹಿರಿಯ ಸದಸ್ಯ ಎಸ್.ಎಂ.ರಫೀಕ್ (17ನೇ ವಾರ್ಡ್), ಅಫ್ಜಲ್ (21ನೇ ವಾರ್ಡ್), ಎನ್.ಎಸ್.ಚಂದ್ರಶೇಖರ್ (28ನೇ ವಾರ್ಡ್), ಎಂ.ಸ್ವಾತಿ (22ನೇ ವಾರ್ಡ್), ಶಕೀಲಾ ಭಾನು (3ನೇ ವಾರ್ಡ್), ರತ್ನಮ್ಮ (2ನೇ ವಾರ್ಡ್) ಮತ್ತು ಮೀನಾಕ್ಷಿ (30ನೇ ವಾರ್ಡ್) ಅವರನ್ನು ಉಚ್ಚಾಟಿಸಲಾಗಿದ್ದು, ಪಕ್ಷದ್ರೋಹಿಗಳಿಗೆ ತಕ್ಕ ಪಾಠ ಕಲಿಸಲಾಗಿದೆ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.
ಅ.31 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಂಬಿಕಾ ನಾರಾಯಣಸ್ವಾಮಿ ವಿರುದ್ಧ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಸದಸ್ಯರನ್ನು 6 ವರ್ಷ ಉಚ್ಚಾಟಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್‌ನ 16 ಸದಸ್ಯರಿಗೂ ವಿಪ್ ನೀಡಲಾಗಿತ್ತು. ಆದರೆ, ರತ್ನಮ್ಮ, ಶಕೀಲಾ ಭಾನು, ಎಂ.ಸ್ವಾತಿ ಮತದಾನದಿಂದ ದೂರ ಉಳಿದರು. ಕೊನೇ ಕ್ಷಣದಲ್ಲಿ ರಫೀಕ್, ಅಫ್ಜಲ್, ಎನ್.ಎಸ್.ಚಂದ್ರಶೇಖರ್, ಮೀನಾಕ್ಷಿ ಸೇರಿ 4 ಸದಸ್ಯರು ಪಕ್ಷದ ಅಭ್ಯರ್ಥಿ ಅಂಬಿಕಾ ನಾರಾಯಣಸ್ವಾಮಿ ಅವರನ್ನು ಬಿಟ್ಟು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಆನಂದ್‌ರೆಡ್ಡಿಗೆ ಮತ ಚಲಾಯಿಸಿ ಕಾಂಗ್ರೆಸ್‌ನ ಗಾದಿ ಕನಸು ಭಗ್ನವಾಗಿಸಿದ್ದರು.
ನಿರೀಕ್ಷಿಸದ ವರಿಷ್ಠರ ಶಾಕ್ : ಅಡ್ಡ ಮತದಾನ ನಗರಸಭೆಯಲ್ಲಿ ಮೊದಲಲ್ಲ. ಹಿಂದೆಯೂ ಹಲವು ಬಾರಿ ಪಕ್ಷದ ತೀರ್ಮಾನವನ್ನು ಉಲ್ಲಂಘಿಸಿ, ವಿಪಕ್ಷಗಳು ಮೇಲುಗೈ ಸಾಧಿಸಲು ಸಹಕಾರ ನೀಡಿದ್ದ ಉದಾಹರಣೆಗಳು ಸಾಕಷ್ಟಿವೆ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಹಗ್ಗಜಗ್ಗಾಟದಲ್ಲಿ ಕಿಂಗ್ ಮೇಕರ್ ಎಂತಲೇ ಹಿರಿಯ ಸದಸ್ಯ ಎಸ್.ಎಂ.ರಫಿಕ್ ಹೆಸರುವಾಸಿ. ಅವರ ನೇತೃತ್ವದಲ್ಲಿಯೇ ಗೆಲುವಿನ ನಗೆ ಬೀರಿದ ಬಂಡಾಯ ಅಭ್ಯರ್ಥಿಗಳು ಬಹಳಷ್ಟಿದ್ದಾರೆ. ಸ್ವಪಕ್ಷೀಯ ಸದಸ್ಯರು ಕೈ ಕೊಟ್ಟರೂ ವರಿಷ್ಠರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇದರಿಂದ ಇಲ್ಲಿ ಅಡ್ಡ ಮತದಾನ ಮಾಮೂಲಿ ಎನ್ನುವಂತಾಗಿತ್ತು, ಆದರೆ ಈ ಬಾರಿಯ ಉಚ್ಚಾಟನೆ ಅಸ್ತ್ರವು 7 ಸದಸ್ಯರು ಕೈ ಕೈ ಹಿಸುಕಿಕೊಳ್ಳುವಂತೆ ಮಾಡಿದೆ.
ನಿರ್ದಾಕ್ಷಿಣ್ಯ ಕ್ರಮಕ್ಕೆ ಪಟ್ಟು : ಸ್ವಪಕ್ಷೀಯ ಅಭ್ಯರ್ಥಿ ಪರ ಮತ ಚಲಾಯಿಸಿದ ನಿಷ್ಠಾವಂತ 9 ಸದಸ್ಯರು ಪಕ್ಷದ್ರೋಹಿ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ರಾಜೀನಾಮೆ ನೀಡುವ ಇಲ್ಲವೇ ಪಕ್ಷಾಂತರಗೊಳ್ಳುವ ಬೆದರಿಕೆಯನ್ನೊಡ್ಡಿದ್ದರು.
ಸಮರ್ಥನೆಗಿಳಿದ ಸದಸ್ಯರು : ಪಕ್ಷದಿಂದ ಉಚ್ಚಾಟನೆಯ ಆದೇಶ ಹೊರ ಬರುತ್ತಿದ್ದಂತೆ ಕೆಲ ಸದಸ್ಯರು ಕಂಗಾಲಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿನ ಇಕ್ಕಟ್ಟಿನ ಪರಿಸ್ಥಿತಿಯ ಬಗ್ಗೆ ನಾಯಕರ ಎದುರು ಅಳಲು ತೋಡಿಕೊಂಡು ಉಚ್ಚಾಟನೆಯ ತೂಗುಗತ್ತಿಯಿಂದ ಪಾರಾಗಲು ಯತ್ನಿಸುತ್ತಿದ್ದಾರೆ.ಚುನಾವಣೆಯ ಎರಡು ಗಂಟೆಗೂ ಮೊದಲು ಈ ಹಿಂದಿನಿಂದಲೂ ಮಾರ್ಗದರ್ಶನ ನೀಡುತ್ತಿದ್ದ ಸ್ವಪಕ್ಷೀಯ ಹಿರಿಯ ಸದಸ್ಯರ ಅಣತಿಯಂತೆ ನಡೆದುಕೊಂಡೆವು, ಸ್ಥಳೀಯ ನಾಯಕರೂ ಅವರ ಮಾತಿಗೆ ಹೂಂಗುಟ್ಟುವ ಮಾದರಿಯಲ್ಲೇ ನಾವೂ ಕೊನೇ ಕ್ಷಣದಲ್ಲಿ ನಿಲುವು ಬದಲಾಯಿಸಿದ್ದೇವೆ ಎಂದು ಹೇಳಿಕೊಂಡಿದ್ದು ಅನರ್ಹತೆ ಪ್ರಕ್ರಿಯೆ ಪ್ರಾರಂಭವಾಗುವಷ್ಟರಲ್ಲಿ ಮನವೊಲಿಸಿಕೊಳ್ಳಲು ಯತ್ನಿಸಲಾಗುತ್ತಿದ್ದಾರೆ. ಒಂದು ವೇಳೆ ಈ ಯತ್ನದಲ್ಲಿ ವಿಫಲವಾದರೆ ನ್ಯಾಯಾಲಯದ ಮೆಟ್ಟಿಲೇರುವುದರ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ಪಕ್ಷದ್ರೋಹಿಗಳಿಗೆ ತಕ್ಕ ಪಾಠ ; ವಿಪ್ ಉಲ್ಲಂಘಿಸಿದ ಸದಸ್ಯರನ್ನು ಉಚ್ಚಾಟಿಸುವ ಮೂಲಕ ಪಕ್ಷದ್ರೋಹಿಗಳಿಗೆ ಪಾಠ ಕಲಿಸಿದಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ತಿಳಿಸಿದರು.ಕಾಂಗ್ರೆಸ್‌ಗೆ ಆಡಳಿತ ಚುಕ್ಕಾಣಿ ಹಿಡಿಯುವ ಅವಕಾಶ ಇತ್ತು. ಆದರೆ, ಆಮಿಷಕ್ಕೊಳಗಾದ ಸದಸ್ಯರು ಅಡ್ಡ ಮತದಾನ ಮಾಡಿ, ಪಕ್ಷಕ್ಕೆ ದ್ರೋಹ ಮಾಡಿದರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮೊದಲು ಕಾಂಗ್ರೆಸ್‌ನ ಇಬ್ಬರು ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಹೈಜಾಕ್ ಮಾಡಿದ್ದರು, ಬಳಿಕ ಐವರು ಸದಸ್ಯರು ಕಾಂಗ್ರೆಸ್‌ಗೆ ಮತ ಚಲಾಯಿಸುವುದನ್ನು ತಪ್ಪಿಸಲಾಗಿದೆ. ಇದಕ್ಕೆ ಆಪರೇಷನ್ ಕಮಲವೇ ಮುಖ್ಯ ಕಾರಣ ಎಂದು ಆರೋಪಿಸಿದರು.