ಸ್ವದೇಶಕ್ಕೆ ತೆರಳುವ ರಷ್ಯನ್ನರ ತಪಾಸಣೆ

12gkn1
Published on

ಗೋಕರ್ಣ: ಕರೊನಾ ಲಾಕ್​ಡೌನ್ ಕಾರಣ ಎರಡು ತಿಂಗಳಿನಿಂದ ಅನಿವಾರ್ಯವಾಗಿ ಇಲ್ಲಿ ತಂಗಿದ್ದ ರಷ್ಯನ್ ಪ್ರವಾಸಿಗರು ಈಗ ಸ್ವದೇಶಕ್ಕೆ ತೆರಳುತ್ತಿದ್ದು, ಮಂಗಳವಾರ ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಎಲ್ಲರ ತಪಾಸಣೆ ನಡೆಸಲಾಯಿತು.

ಸ್ವದೇಶಕ್ಕೆ ವಾಪಸಾಗಲು ಸದ್ಯ 45 ರಷ್ಯನ್ನರಿಗೆ ಮಾತ್ರ ಅನುಮತಿ ದೊರೆತಿದೆ. ಇವರಲ್ಲಿ 5 ವರ್ಷದ ನಾಲ್ಕು ಮಕ್ಕಳಿಂದ ಹಿಡಿದು 77 ವರ್ಷದ ವೃದ್ಧರು ಸೇರಿದ್ದಾರೆ. ಇಲ್ಲಿಯೇ ಹುಟ್ಟಿದ ಆರು ತಿಂಗಳ ಶಿಶುವೂ ಇಲ್ಲಿಂದ ತೆರಳಲಿರುವುದು ವಿಶೇಷ. ಇವರಲ್ಲಿ ಬಹುತೇಕರು ಕಳೆದ ಹಲವು ವರ್ಷಗಳಿಂದ ಗೋಕರ್ಣಕ್ಕೆ ಬರುವವರಾಗಿದ್ದಾರೆ.

ಇದೇ ವೇಳೆ ಮೇ14 ರಂದು ತೆರಳುವುದಾಗಿ ಪೊಲೀಸ್ ತಪಾಸಣೆ ವೇಳೆ ತಿಳಿಸಿದ್ದ ಇಬ್ಬರು ರಷ್ಯನ್ನರು ಆರೋಗ್ಯ ತಪಾಸಣೆಗೆ ಹಾಜರಿರಲಿಲ್ಲ. ಆರೋಗ್ಯ ಕಾರ್ಯಕರ್ತರು ಅವರನ್ನು ಸಂರ್ಪಸಲು ಪ್ರಯತ್ನಿಸಿದರೂ ಅವರು ಸಿಗದೇ ಇರುವುದರಿಂದ ಅವರ ಹುಡುಕಾಟ ನಡೆಸಲಾಗುತ್ತಿದೆ.

ಇವರೆಲ್ಲ ಪೊಲೀಸ್ ವಿಚಾರಣೆ ತರುವಾಯ ಬುಧವಾರ ಇಲ್ಲಿಂದ ಗೋವಾಕ್ಕೆ ತೆರಳಲಿದ್ದಾರೆ. ಗೋವಾದಿಂದ ಮೇ 14ರಂದು ವಿಶೇಷ ವಿಮಾನದ ಮೂಲಕ ರಷ್ಯಾಕ್ಕೆ ಹೋಗುವರು. ಪೊಲೀಸ್ ದಾಖಲೆ ಪ್ರಕಾರ ಗೋಕರ್ಣದಲ್ಲಿ 180 ರಷ್ಯನ್ನರು ವಾಸವಾಗಿದ್ದು ಈ ಪೈಕಿ ನೂರಕ್ಕೂ ಅಧಿಕ ರಷ್ಯನ್ ಪ್ರವಾಸಿಗರು ವಾಪಸಾತಿಗಾಗಿ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net