ಸ್ವದೇಶ ದರ್ಶನ್: ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಬಲ ನಿರೀಕ್ಷೆ

news-7-9
Published on

ಮಂಜುನಾಥ ಟಿ.ಭೋವಿ ಮೈಸೂರು

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಸ್ವದೇಶ ದರ್ಶನ್-2.0’ ಯೋಜನೆಗೆ ಆಯ್ಕೆಯಾಗುವ ಮೂಲಕ ಅರಮನೆ ನಗರಿ ಮೈಸೂರಿನ ಮುಡಿಗೆ ಮತ್ತೊಂದು ಗರಿ ಬಂದಿದ್ದು, ಸ್ಥಳೀಯ ಪ್ರವಾಸೋದ್ಯಮ ಅಭಿವೃದ್ಧಿಗೆ ಬಲ ಬರುವ ನಿರೀಕ್ಷೆ ಗರಿಗೆದರಿದೆ.

ಕೇಂದ್ರ ಪ್ರವಾಸೋದ್ಯಮ ಸಚಿವಾಲಯ 19 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 36 ಪ್ರಸಿದ್ಧ ಹಾಗೂ ಮಹತ್ವದ ಸ್ಥಳಗಳನ್ನು ಈ ಯೋಜನೆಗೆ ಆಯ್ಕೆ ಮಾಡಿದೆ. ಜ.5ರಂದು ಪಟ್ಟಿ ಬಿಡುಗಡೆಗೊಳಿಸಿದೆ. ಇದರಲ್ಲಿ ಮಲ್ಲಿಗೆ ನಗರಿ ಮೈಸೂರು ಸಹ ಜಾಗ ಪಡೆದುಕೊಂಡಿದೆ. ವಿಶ್ವಪ್ರಸಿದ್ಧ ಹಂಪಿಯೂ ಸ್ಥಾನ ಗಿಟ್ಟಿಸಿಕೊಂಡಿದೆ. ಈ ಯೋಜನೆಗೆ ರಾಜ್ಯದಿಂದ ಉಭಯ ನಗರಗಳು ಮಾತ್ರ ಆಯ್ಕೆಯಾಗಿವೆ.

ಈ ಯೋಜನೆಯ ಸ್ಪರ್ಶದಿಂದ ಮೈಸೂರು ಪ್ರವಾಸೋದ್ಯಮಕ್ಕೆ ನೆರವಾಗಲಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ.


ನಗರಿಯ ಚಹರೆ ಬದಲಾಗಲಿದೆಯೇ?:
ಮೈಸೂರಿಗೆ ನಿತ್ಯ ದೇಶ-ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಆದರೆ, ಪ್ರವಾಸಿಗರಿಗೆ ಕನಿಷ್ಠ ಸೌಕರ್ಯಗಳ ಕೊರತೆ ಕಾಡುತ್ತಿದೆ. ಅದನ್ನು ನೀಗಿಸಬೇಕೆಂಬ ಕೂಗು ಅನೇಕ ವರ್ಷಗಳಿಂದ ಇದೆ. ಆದರೆ, ಅದು ರಾಜಕೀಯ ಭರವಸೆಯಾಗಿಯೇ ಉಳಿದಿದೆ. ಸ್ವದೇಶ ದರ್ಶನ್ ಯೋಜನೆಯಡಿಯಲ್ಲಾದರೂ ಅರಮನೆ ನಗರಿಯ ಚಹರೆ ಪರಿವರ್ತನೆ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.


ಶುಕ್ರದೆಸೆ ಕಲ್ಪಿಸಲಿದೆಯೇ?:
2014-15ರಲ್ಲಿ ಥೀಮ್ ಆಧಾರಿತ ಪ್ರವಾಸಿ ಸರ್ಕ್ಯೂಟ್‌ಗಳ ಸಮಗ್ರ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆ ಭಾರತದಲ್ಲಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಿ, ಅಭಿವೃದ್ಧಿಪಡಿಸುವುದಾಗಿದೆ. ಜತೆಗೆ, ಸ್ಥಳೀಯ ಪ್ರವಾಸೋದ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಗುರಿ ಹೊಂದಿದೆ. ಅದಕ್ಕಾಗಿ ಈ ಯೋಜನೆಯಡಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸು ನೆರವು ನೀಡಲಿದ್ದು, ಇದರಿಂದ ಅಭಿವೃದ್ಧಿ ಆಗಲಿದೆ.

ಇದಕ್ಕೆ ಬೇಕಾದ ಮೂಲಸೌಕರ್ಯ ಕಲ್ಪಿಸಿಕೊಡಲಿದೆ. ಅಂತೆಯೇ, ಮೈಸೂರು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಅನುದಾನ ಹರಿದು ಬರಲಿದೆ. ಇದು ಸಹಜವಾಗಿ ಸ್ಥಳೀಯ ಪ್ರವಾಸೋದ್ಯಮಕ್ಕೆ ಶುಕ್ರದೆಸೆ ಕಲ್ಪಿಸಿಕೊಡಲಿದೆಯೇ ಎಂಬ ಪ್ರಶ್ನೆ ಮೂಡಿಸಿದೆ.


ದಸರಾ ವಸ್ತುಪ್ರದರ್ಶನ ಆಯ್ಕೆ:
‘ಸ್ವದೇಶ್ ದರ್ಶನ್’ ಯೋಜನೆಯಡಿ ‘ಮೈಸೂರು ದಸರಾ ವಸ್ತು ಪ್ರದರ್ಶನ’ವನ್ನು ಅಭಿವೃದ್ಧಿಪಡಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಭವಿಷ್ಯದಲ್ಲಿ ವಿಶೇಷ ಪ್ರವಾಸಿ ತಾಣವಾಗಿ ರೂಪಿಸುವ ಮೂಲಕ ವರ್ಷವಿಡೀ ಚಟುವಟಿಕೆಗಳು ಇಲ್ಲಿ ಮೇಳೈಸಲಿವೆ.
ಈ ಯೋಜನೆಗೆ ಮೈಸೂರಿನ ದಸರಾ ವಸ್ತುಪ್ರದರ್ಶನ ಅಭಿವೃದ್ಧಿಪಡಿಸುವ ಪ್ರಸ್ತಾವನೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಮುಖಾಂತರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದಕ್ಕೆ ಇದೀಗ ಮನ್ನಣೆ ನೀಡಿದೆ.

ಪ್ರವಾಸಿ ತಾಣವಾಗಿ ಅಭಿವೃದ್ಧಿ:
ಅಂದಾಜು 80 ಎಕರೆ ವಿಸ್ತಾರ ಹೊಂದಿರುವ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ವರ್ಷದಲ್ಲಿ 3 ತಿಂಗಳು ಮಾತ್ರ ಚಟುವಟಿಕೆ ಇರುತ್ತದೆ. ದಸರಾ ವಸ್ತುಪ್ರದರ್ಶನ ಮುಗಿದ ಬಳಿಕ ಇದು ಖಾಲಿ ಹೊಡೆಯುವ ಮೂಲಕ ನಿರುಪಯುಕ್ತವಾಗಿರುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ಇಲ್ಲಿಯವರೆಗೂ ಸಾಧ್ಯವಾಗಿರಲಿಲ್ಲ. ಹೀಗಾಗಿ, ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ತಾಣವಾಗಿ ರೂಪಿಸಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಅದು ಈಗ ಈಡೇರುವ ನಿರೀಕ್ಷೆಯ ಬೆಳ್ಳಿಮೋಡವನ್ನು ಸೃಷ್ಟಿಯಾಗಿದೆ.

ಲಾಭ ಏನು?:
ಚಾಮುಂಡಿಬೆಟ್ಟ, ಮೃಗಾಲಯ, ಅರಮನೆ ಬಳಿಕ ಮತ್ತೊಂದು ಪ್ರೇಕ್ಷಣೀಯ ಸ್ಥಳವಾಗಿ ವಸ್ತುಪ್ರದರ್ಶನ ಅಭಿವೃದ್ಧಿ ಆಗಲಿದೆ. ಜತೆಗೆ, ಸರ್ವಋತುವಿನಲ್ಲೂ ಪ್ರವಾಸೋದ್ಯಮಕ್ಕೆ ಪೂರಕವಾಗಿ ಚಟುವಟಿಕೆಗಳು ನಡೆಯಲಿವೆ. ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವ ಮೂಲಕ ಪ್ರವಾಸೋದ್ಯಮ ಬೆಳೆವಣಿಗೆಗೆ ಪೂರಕವಾಗಲಿದೆ.

ಚಾಮುಂಡಿಬೆಟ್ಟದಲ್ಲಿ ‘ಪ್ರಸಾದ’:
ಕೇಂದ್ರ ಸರ್ಕಾರದ ‘ಪ್ರಸಾದ’ ಯೋಜನೆ ವ್ಯಾಪ್ತಿಗೆ ಮೈಸೂರಿನ ನಾಡದೇವಿ ಚಾಮುಂಡೇಶ್ವರಿ ದೇವಸ್ಥಾನವನ್ನು ತರಲಾಗಿದೆ. ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ. 41.29 ಕೋಟಿ ರೂ. ಅನುದಾನ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ.

ದಸರಾ ವಸ್ತುಪ್ರದರ್ಶನವು ಸ್ವದೇಶ್ ದರ್ಶನ್ ಯೋಜನೆಗೆ ಆಯ್ಕೆಯಾಗಿದ್ದು, ವಸ್ತುಪ್ರದರ್ಶನವನ್ನು ಎಲ್ಲ ಋತುವಿನಲ್ಲೂ ಪ್ರವಾಸೋದ್ಯಮ ಚಟುವಟಿಕೆಗೆ ಪೂರಕವಾದ ಕೇಂದ್ರವನ್ನಾಗಿ ಮಾಡಲಾಗುವುದು. ವರ್ಷವಿಡೀ ವಸ್ತುಪ್ರದರ್ಶನ ಇರಲಿದೆ. ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲಾಗುತ್ತದೆ.ಪ್ರತಾಪ್ ಸಿಂಹ ಸಂಸದ

ದಸರಾ ವಸ್ತುಪ್ರದರ್ಶನವು ಸ್ವದೇಶಿ ದರ್ಶನ ಯೋಜನೆಗೆ ಆಯ್ಕೆಯಾಗಿರುವುದು ಅಭಿವೃದ್ಧಿ ಪಥದಲ್ಲಿ ಹೊಸ ಮೈಲಿಗಲ್ಲಾಗಿದೆ. ನಾಡಿನ ಪರಂಪರೆ ಮತ್ತು ಸಂಸ್ಕೃತಿ ಬಿಂಬಿಸುವ ಹಿನ್ನೆಲೆಯಲ್ಲಿ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಲಾಗುವುದು.ಮಿರ್ಲೆ ಶ್ರೀನಿವಾಸಗೌಡ, ಅಧ್ಯಕ್ಷ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net