

ಮೈಸೂರು: ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ‘ಸ್ವಚ್ಛತಾ ಹಿ ಸೇವಾ’(ಸ್ವಚ್ಛತೆಯೇ ಸೇವೆ) ವಿಶೇಷ ಜನಾಂದೋಲನವನ್ನು ಸೆ. 15ರಿಂದ ಅ.2ರವರೆಗೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ತಿಳಿಸಿದ್ದಾರೆ.
ಅ. 2ರಂದು ಮಹಾತ್ಮ ಗಾಂಧೀಜಿ ಜನ್ಮದಿನದ ಸ್ಮರಣಾರ್ಥವಾಗಿ ಸ್ವಚ್ಛ ಭಾರತ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹಾತ್ಮರ ಧ್ಯೇಯವಾಕ್ಯ ಸ್ವಚ್ಛತೆಯೇ ದೈವತ್ವ ಎಂಬ ಕನಸನ್ನು ನನಸಾಗಿಸಲು 15 ದಿನಗಳ ಕಾಲ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಆಂದೋಲನವನ್ನು ಹಮ್ಮಿಕೊಳ್ಳಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ತೀರ್ಮಾನಿಸಲಾಗಿದೆ. ಈ ವರ್ಷದ ಆಂದೋಲನದ ಘೋಷವಾಕ್ಯವಾಗಿ ಕಸಮುಕ್ತ, ತ್ಯಾಜ್ಯಮುಕ್ತ ಭಾರತ ಎಂದು ಘೋಷಿಸಲಾಗಿದ್ದು, ಎಲ್ಲೆಡೆ ಸ್ವಚ್ಛತೆ ಸಾಧಿಸಿ, ಸ್ವಚ್ಛ ಸುಂದರ, ಸಧೃಢ ಗ್ರಾಮಗಳನ್ನು ರೂಪಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮಗಳ ಸ್ವಚ್ಛತೆಗೆ ಸ್ವಯಂ ಪ್ರೇರಿತರಾಗಿ ಶ್ರಮದಾನ ಚಟುವಟಿಕೆಗಳಲ್ಲಿ ಭಾಗವಹಿಸುವುದು. ಜಿಲ್ಲೆಯ ತಾಲೂಕು, ಗ್ರಾ.ಪಂ ವ್ಯಾಪ್ತಿಗಳಲ್ಲಿ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣ, ನದಿ ತೀರ, ಸಾಂಸ್ಥಿಕ, ಸಮುದಾಯ ಭವನ, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು, ಚರಂಡಿಗಳು, ಸರ್ಕಾರಿ ಶಾಲೆ, ಅಂಗನವಾಡಿ ಮತ್ತು ನಾಲಾಗಳು ಮುಂತಾದ ಸ್ಥಳಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮತ್ತು ಸದೃಶ್ಯ ಸ್ವಚ್ಛತೆ ಕಾಯ್ದುಕೊಳ್ಳಲು ಶ್ರಮದಾನ ಮತ್ತು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದು.
ಜಿಲ್ಲೆಯ ತಾಲೂಕು, ಗ್ರಾ.ಪಂ. ವ್ಯಾಪ್ತಿಗಳಲ್ಲಿ ನದಿ ತೀರ ಪ್ರದೇಶ, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು, ಚರಂಡಿಗಳು ಮುಂತಾದ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕೈಗೊಂಡು ಜನರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಲು ಚಟುವಟಿಕೆ ಆಯೋಜಿಸಬೇಕು. ಇದು ಉತ್ತಮವಾಗಿ ಯಶಸ್ವಿಗೊಳಿಸಲು ಹಾಗೂ ಸದೃಢ ಭಾರತ ನಿರ್ಮಾಣಕ್ಕೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರ ಶ್ರಮ ಅಗತ್ಯವಿದೆ ಎಂದು ತಿಳಿಸಿದ್ದಾರೆ.