

ಕಲಬುರಗಿ: ಸ್ವಚ್ಛತೆಯ ಕೊರತೆಯಿಂದ ಬಹುತೇಕ ರೋಗಗಳು ಬರುತ್ತವೆ. ಸ್ವಚ್ಚತೆಯೇ ಆರೋಗ್ಯದ ಮೂಲ ಮಂತ್ರ ಎಂದು ವೈದ್ಯೆ ಡಾ.ಅಂಬಿಕಾ ಪಾಟೀಲ್ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಶಾಂತಾ ಆಸ್ಪತ್ರೆಯ ಸಹಯೋಗದಲ್ಲಿ ಸ್ವಚ್ಚತಾ ಸಿಬ್ಬಂದಿಗಾಗಿ ಆಯೋಜಿಸಿದ್ದ ಸಫಾಯಿ ಮಿತ್ರ ಸುರಕ್ಷಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮನೆ ಸುತ್ತಲಿನ ಮತ್ತು ದೇಹವನ್ನು ಸ್ವಚ್ಛವಾಗಿಟ್ಟರೆ ರೋಗಗಳು ಬರದಂತೆ ತಡೆಯಬಹುದು. ವಿವಿಯಲ್ಲಿ ಸ್ವಚ್ಛತೆಯನ್ನು ನಾವೇ ಕಾಪಾಡಬೇಕು ಎಂದರು.
ಉಟದ ಮೊದಲು, ಬಹಿರ್ದೆಸೆಗೆ ಹೋದ ಮೇಲೆ, ಯಾವುದೆ ಕೆಲಸ ಮಾಡಿದ ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಅಸ್ವಚ್ಛ ಕೈಗಳಿಂದ ಕಣ್ಣು, ಕಿವಿ, ಮೂಗು ಮುಟ್ಟಬೇಡಿ. ರೋಗ ಬದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ ಮಾತನಾಡಿ, ಸ್ವಚ್ಛತೆ ಕೊರತೆಯಿಂದ ೧೦೦ರಲ್ಲಿ ಏಳು ಜನ ಅನಾರೋಗ್ಯದ ವೆಚ್ಚದಿಂದ ಬಡತನಕ್ಕೆ ದೂಡಲ್ಪಡುತ್ತಿದ್ದಾರೆ. ಸ್ವಚ್ಛತೆ ಕಾಪಾಡಿ, ಪ್ರತಿ ವರ್ಷ ಒಂದು ವರ್ಷ ೫೦ ಸಾವಿರ ರೂ. ಆರೋಗ್ಯದ ಖರ್ಚು ಉಳಿಸಬಹುದು ಎಂದರು.
ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಸ್ವಚ್ಛತಾ ಸಿಬ್ಬಂದಿಗೆ ಉಚಿತ ಸುರಕ್ಷತಾ ಕಿಟ್‌ಗಳನ್ನು ವಿತರಿಸಿದರು. ಶಾಂತಾ ಆಸ್ಪತ್ರೆಯ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಿತು. ಔಷಧ ವಿತರಿಸಲಾಯಿತು. ಶಾಂತಾ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಸಂಜೀವ ಪಾಟೀಲ್, ಸಿಯುಕೆ ಕ್ಯಾಂಪಸ್ ಅಭಿವೃದ್ಧಿ ವಿಭಾಗದ ಡಿನ್ ಪ್ರೊ.ಚನ್ನವೀರ ಆರ್ ಎಂ., ಸ್ವಚ್ಛತಾ ಹಿ ಸೇವಾ ಯೋಜನೆ ನೋಡಲ್ ಅಧಿಕಾರಿ ಡಾ.ಗಣಪತಿ ಸಿನ್ನೂರ ಇತರರಿದ್ದರು. ಡಾ.ಶೈಲಜಾ ಕೊನೆಕ್ ನಿರೂಪಣೆ ಮಾಡಿ, ಸ್ವಾಗತಿಸಿದರು. ವೈದ್ಯಾಧಿಕಾರಿ ಡಾ.ಜ್ಯೋತಿ ತೆಗನೂರ ವಂದಿಸಿದರು.