ಸ್ವಚ್ಛತೆಯ ಸಂದೇಶ, ಸೈಕಲ್ ಪ್ರವಾಸ

17KMT1
Published on

ಕುಮಟಾ: ನಾಲ್ಕೂವರೆ ತಿಂಗಳಿಂದ ಅಸ್ಸಾಂ ಮೂಲದ 29ರ ಹರೆಯದ ಲೂಯಿಸ್ ದಾಸ ಎಂಬವರು ಹರಿದ್ವಾರದಿಂದ ಸೈಕಲ್ ಮೇಲೆ ಭಾರತಯಾತ್ರೆ ಹೊರಟು ಸ್ವಸ್ಥ ಸಮಾಜ ನಿರ್ವಣಕ್ಕೆ ಕಸದಡಬ್ಬಿಗಳ ಬಳಕೆಯ ಸಂದೇಶ ಸಾರುತ್ತಾ ಮಂಗಳವಾರ ಕುಮಟಾಕ್ಕೆ ಬಂದರು.

ಪ್ರಸ್ತುತ ಹರಿದ್ವಾರದ ಪೈಲಟ್ ಬಾಬಾ ಆಶ್ರಮದಲ್ಲಿ ಸೇವಾನಿರತರಾಗಿರುವ ಲೂಯಿಸ್ ದಾಸ 2019 ರ ಅಕ್ಟೋಬರ್ 30 ರಂದು ಹರಿದ್ವಾರದಿಂದ ಸೈಕಲ್ ಯಾತ್ರೆ ಹೊರಟು ದಿನಕ್ಕೆ ಸುಮಾರು 10 ತಾಸು ಪೆಡಲ್ ತುಳಿಯುತ್ತಾ ಉತ್ತರ ಪ್ರದೇಶ, ಬಿಹಾರ, ಸಿಕ್ಕಿಂ, ತ್ರಿಪುರಾ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಸ್ಸಾ, ಆಂಧ್ರಪ್ರದೇಶ, ತೇಲಂಗಾಣ, ಛತ್ತೀಸಘಡ, ಪುದುಚೇರಿ, ತಮಿಳುನಾಡು, ಕೇರಳ ಸುತ್ತಿ ಕರ್ನಾಟಕಕ್ಕೆ ಬಂದಿದ್ದಾರೆ. ರಾತ್ರಿಹೊತ್ತು ರೈಲುನಿಲ್ದಾಣ, ಪೆಟ್ರೋಲ್​ಪಂಪ್, ಆಶ್ರಮಗಳು, ದೇವಾಲಯ, ಆಸ್ಪತ್ರೆ, ಅಂಗಡಿ, ಪೊಲೀಸ್ ಠಾಣೆಗಳಲ್ಲಿ ತಂಗುತ್ತಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದನ್ನು ತಪ್ಪಿಸಲು ಒಣ ಹಾಗೂ ಹಸಿಕಸ ಬೇರ್ಪಡಿಸಿ ಕಸದ ಡಬ್ಬಿಗಳಲ್ಲಿ ಸಮರ್ಪಕವಾಗಿ ವಿಲೇವಾರಿ ಮಾಡುವ ಸರಳ ಸಂದೇಶವನ್ನು ಹೊತ್ತು ಸಾಗಿದ್ದಾರೆ. ಮಾರ್ಗಮಧ್ಯೆ ನೂರಾರು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಉಪನ್ಯಾಸ ಮಾಡಿದ್ದಾರೆ.

ತಮ್ಮ ಅನುಭವವನ್ನು ವಿಜಯವಾಣಿಯೊಂದಿಗೆ ಹಂಚಿಕೊಂಡ ಲೂಯಿಸ್ ದಾಸ್, ಸಮಗ್ರ ಆರೋಗ್ಯಕ್ಕಾಗಿ ಸ್ವಚ್ಛತೆಯ ಅನಿವಾರ್ಯತೆಯ ಬಗ್ಗೆ ಜನರು ಯೋಚಿಸುವಂತೆ ಮಾಡುವುದೇ ನನ್ನ ಉದ್ದೇಶ. ಇದನ್ನು ಕೇವಲ ಒಂದು ಜಿಲ್ಲೆ ಅಥವಾ ರಾಜ್ಯಕ್ಕೆ ಮಾಡಿದರೆ ಸಾಲದು, ಭಾರತದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ತಲುಪಬೇಕೆಂಬ ಗುರಿಯೊಂದಿಗೆ ಯಾತ್ರೆಗೆ ಸಂಕಲ್ಪಿಸಿದೆ. ನನ್ನ ಆಧ್ಯಾತ್ಮ ಗುರು ಮಹಾಮಂಡಲೇಶ್ವರ ಸಿದ್ಧಾರ್ಥಗಿರಿ ಮಹಾರಾಜ್ ಸೈಕಲ್ ಖರೀದಿಸಿ ಕೊಟ್ಟರು. ಈಗಾಗಲೇ ಅರ್ಧಕ್ಕಿಂತ ಹೆಚ್ಚು ಭಾಗ ಯಾತ್ರೆ ಮುಗಿದಿದೆ. ಎಲ್ಲಿಗೆ ಹೋದರೂ ಕಸದ ಸಮಸ್ಯೆ ಸಮಾಧಾನಕರವಾಗಿಲ್ಲ. ಪುದುಚೇರಿ ಹಾಗೂ ವಿಜಯವಾಡದಲ್ಲಿ ಸ್ವಲ್ಪ ಸ್ವಚ್ಛತೆ ಇತ್ತು. ಉಳಿದೆಡೆ ಸ್ವಚ್ಛ್ಛೆಯ ಬಗ್ಗೆ ಜನಸಾಮಾನ್ಯರಲ್ಲಿ ನಿರ್ಲಕ್ಷ್ಯ ಕಂಡಿದ್ದೇನೆ. ಅಂಗಡಿಗಳಲ್ಲಿ ಕಸದ ಡಬ್ಬಿಗಳ ಬಳಕೆ ಇಲ್ಲ. ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ ಎಂದರು.

ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ನನ್ನ ಯಾತ್ರೆ ಪುನಃ ಹರಿದ್ವಾರದಲ್ಲಿ ಸಮಾಪನಗೊಳ್ಳಲಿದೆ. ಕಸದಡಬ್ಬಿಗಳ ಬಗ್ಗೆ ಜಾಗೃತಿ ಮೂಡಿಸಲು ಇಡೀ ದೇಶ ಸುತ್ತಿದ ಅನುಭವವನ್ನು ಪುಸ್ತಕದಲ್ಲಿ ದಾಖಲಿಸುವ ಇಚ್ಛೆ ಇದೆ ಎಂದು ಲೂಯಿಸ್ ದಾಸ್ ತಿಳಿಸಿ, ಗೋವಾ-ಮಹಾರಾಷ್ಟ್ರದೆಡೆಗೆ ಪ್ರಯಾಣ ಮುಂದುವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net