

ಸಿರಗುಪ್ಪ: ತೆಕ್ಕಲಕೋಟೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವುದನ್ನು ನಿಯಂತ್ರಿಸಲು ಪಪಂ ಮುಂದಾಗಿದೆ. ಇದಕ್ಕಾಗಿ ಕಸ ಹಾಕಿದ ಸ್ಥಳ ಸ್ವಚ್ಛಗೊಳಿಸಿ ಸೆಗಣಿ ಸಾರಿಸಿ ರಂಗೋಲಿ ಬಿಡಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಪಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತಿದಿನ ಬೆಳಗ್ಗೆ ಒಂದೊಂದು ವಾರ್ಡ್‌ಗೆ ಭೇಟಿ ನೀಡಿ ಕಸ ಹಾಕಿದ ಸ್ಥಳವನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಹಾಕದೆ ಪಪಂ ವಾಹನ ಬಂದಾಗ ಅದರಲ್ಲಿ ಹಾಕಬೇಕು ಎಂದು ವಾರ್ಡ್ ನಿವಾಸಿಗಳಿಗೆ ತಿಳಿಸಲಾಗುತ್ತಿದೆ.
ಸಾರ್ವಜನಿಕರು, ಹೋಟೆಲ್‌ನವರು, ವ್ಯಾಪಾರಿಗಳು ತ್ಯಾಜ್ಯವನ್ನು ರಸ್ತೆ ಬದಿ ಸೇರಿದಂತೆ ಇತರ ಸಾರ್ವಜನಿಕ ಸ್ಥಳದಲ್ಲಿ ಹಾಕುತ್ತಿದ್ದಾರೆ. ಇದರಿಂದ ಕಸ ವಿಲೇವಾರಿಯಾಗದೆ ಕೊಳೆತು ನಾರುತ್ತದೆ. ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಪಪಂಗೆ ಪ್ರತಿಯೊಬ್ಬರೂ ಸಹಕಾರ ನೀಡಿದರೆ ಸ್ವಚ್ಛತೆ ಕಾಪಾಡಲು ಸಾಧ್ಯ ಎಂದು ಮುಖ್ಯಾಧಿಕಾರಿ ಪರಶುರಾಮ ತಿಳಿಸಿದರು.