ಸ್ವಚ್ಛತೆಗೆ ಪೌರಕಾರ್ಮಿಕರ ನೇಮಕಕ್ಕೆ ಒತ್ತಾಯ

12mlk01
Published on

ಮೇಲುಕೋಟೆ: ಮೇಲುಕೋಟೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿರುವ ಕಾರಣ ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರನ್ನು ನೇಮಿಸಬೇಕು. ದೇವಾಲಯದ ಮುಂಭಾಗದಲ್ಲಿ ಚರಂಡಿ ದುರಸ್ತಿ ಮಾಡಿಸಬೇಕು. ಅಂಗಡಿ ಮುಂಗಟ್ಟುಗಳಿಂದ ಸ್ವಚ್ಛತಾ ಶುಲ್ಕ ಪಡೆಯಬೇಕು. ಕೋಳಿ ಮಾಂಸದ ಅಂಗಡಿಗಳನ್ನು ನಿಯಂತ್ರಿಸಬೇಕು ಎಂಬ ಸಲಹೆಗಳು ಸಾರ್ವಜನಿಕರಿಂದ ಕೇಳಿ ಬಂದವು.

ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದ ಸ್ಥಳೀಯರು, ಹಿಂದಿನ ಗ್ರಾಮ ಸಭೆಯಲ್ಲಿನ ನಿರ್ಣಯಗಳನ್ನು ಆದ್ಯತೆ ಮೇಲೆ ಅನುಷ್ಠಾನ ಮಾಡಬೇಕು. ಮೀನು ಸಾಕಣೆ, ಕೆರೆ-ಕಟ್ಟೆ, ಕೊಳಗಳನ್ನು ಹರಾಜು ಮಾಡಬೇಕು. ಸರ್ಕಾರಿ ಬಾಲಕರ ಶಾಲೆಯಲ್ಲಿ ಗ್ರಾಪಂ ಸಹಯೋಗದಲ್ಲಿ ನಿರ್ಮಿಸಿರುವ ಶೌಚಗೃಹಗಳನ್ನು ಶಾಲೆಗೆ ಹಸ್ತಾಂತರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಸ್ವಚ್ಛತೆ ಕಾಪಾಡಬೇಕು. ಪಾರ್ಕಿಂಗ್‌ಗೆ ವ್ಯವಸ್ಥಿತ ಜಾಗ ಕಲ್ಪಿಸಬೇಕು ಎಂದು ಸಾರ್ವಜನಿಕರು ಸಭೆಯ ಗಮನಕ್ಕೆ ತಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್ ಮಾತನಾಡಿ, 15ನೇ ಹಣಕಾಸು ಯೋಜನೆಯಲ್ಲಿ ಮಂಜೂರಾದ 17 ಲಕ್ಷ ರೂ. ಅನುದಾನದಲ್ಲಿ ಕೈಗೆತ್ತಿಕೊಳ್ಳುತ್ತಿರುವ ಕಾಮಗಾರಿಯ ಪಟ್ಟಿಯನ್ನು ಸಭೆಯ ಮುಂದಿಟ್ಟರು. ಸಭೆಯ ಅನುಮೋದನೆ ನಂತರ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಂತೆ ಆರಂಭಿಸಲಾಗುತ್ತದೆ. ಮನೆಗಳಲ್ಲಿ ಕೊಟ್ಟಿಗೆ ನಿರ್ಮಾಣ, ಕೋಳಿ ಸಾಕಣೆ ಕೊಠಡಿ ನಿರ್ಮಿಸಲು ಅನುದಾನ ನೀಡಲಾಗುತ್ತದೆ. ಅಗತ್ಯವಿರುವವರು ಸೌಲಭ್ಯ ಪಡೆದುಕೊಳ್ಳಬಹುದು. ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗಪಡಿಸಿಕೊಂಡು ವೈಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿ ನಿರ್ವಹಿಸಬಹುದು. ಇನ್ನು ಗ್ರಾಮ ಪಂಚಾಯಿತಿಗೆ ಸೇರಿದ ಅಂಗಡಿ ಮಳಿಗೆಗಳನ್ನು ವಾರ್ಷಿಕ ಬಾಡಿಗೆಗೆ ಹರಾಜು ಮಾಡಬೇಕಿದೆ ಎಂದು ಮಾಹಿತಿ ನೀಡಿದರು.

ಚೆಲುವನಾರಾಯಣಸ್ವಾಮಿ ದೇವಾಲಯ, ಅರಣ್ಯ ಇಲಾಖೆ ಮತ್ತು ಗೋಮಾಳಕ್ಕೆ ಸೇರಿದ ಸರ್ಕಾರಿ ಸರ್ವೇ ನಂಬರ್ ಸಮಸ್ಯೆಯನ್ನು ನಮ್ಮ ಹಂತದಲ್ಲಿ ತೀರ್ಮಾನ ಮಾಡಲು ಸಾಧ್ಯವಿಲ್ಲ. ಗ್ರಾಪಂ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡು ಸರ್ಕಾರದ ಮಟ್ಟದಲ್ಲಿ ಚರ್ಚಿಸುವಂತೆ ಶಾಸಕರಿಗೆ ಮನವಿ ಮಾಡಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಣಿ ಮುರುಗನ್, ಕುಡಿಯುವ ನೀರು ನೈರ್ಮಲ್ಯಯೋಜನೆಯ ಇಂಜಿನಿಯರ್ ಶ್ರೀನಿವಾಸ್, ಗ್ರಾಪಂ ಉಪಾಧ್ಯಕ್ಷ ಜಿ.ಕೆ.ಕುಮಾರ್, ಸದಸ್ಯರಾದ ಸೋಮಶೇಖರ್, ಜಯರಾಮೇಗೌಡ, ಲಕ್ಷ್ಮಮ್ಮ, ಭಾಗ್ಯಮ್ಮ, ರಾಜೇಶ್ವರಿ, ರೇಷ್ಮೆ ಇಲಾಖೆಯ ಪುಟ್ಟಸ್ವಾಮಿಗೌಡ, ಸಮಾಜ ಕಲ್ಯಾಣ ಇಲಾಖೆ ಪ್ರಸನ್ನಕುಮಾರ್, ಸಾಮಾಜಿಕ ಅರಣ್ಯ ಯೋಜನೆಯ ಯೋಗೇಗೌಡ, ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್, ಮಂಜುನಾಥ್, ಆರೋಗ್ಯ ಇಲಾಖೆಯ ಉಮಾ, ದೇವಮ್ಮ, ಸಂಜೀವಿನಿ ಒಕ್ಕೂಟದ ಕವಿತಾ, ಸವಿತಾ, ಗ್ರಾಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ, ದಿಲೀಪ್, ರವಿ, ಈಶ ಮುರಳಿ, ನಾಗೇಂದ್ರ, ನಿಂಗೇಗೌಡ, ವಿಜಯಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net