

ಮಳವಳ್ಳಿ/ಬೆಳಕವಾಡಿ: ಗ್ರಾಮೀಣ ಪ್ರದೇಶದ ಜನರು ಸ್ವಚ್ಛತೆಗೆ ಒತ್ತು ನೀಡಿದರೆ ಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು ಎಂದು ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ಮಹದೇವ ತಿಳಿಸಿದರು.
ತಾಲೂಕಿನ ಹೊಸಹಳ್ಳಿ ಗ್ರಾಪಂ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಮಾಬಂದಿ ಕಾರ್ಯಕ್ರಮದ ನಂತರ ಸ್ವಚ್ಛತಾ ಇ -ಸೇವಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ನಗರ ಪ್ರದೇಶಗಳಲ್ಲಿ ಮರ-ಗಿಡಗಳ ವಿರಳತೆ ಹಾಗೂ ವಾಹನ ದಟ್ಟಣೆಯಿಂದ ಅಲ್ಲಿನ ವಾಸಿಗಳು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಹಳ್ಳಿಗಳಲ್ಲಿ ಆ ರೀತಿಯ ಯಾವುದೇ ಕೊರತೆಗಳಿಲ್ಲ. ಸುಂದರವಾದ ಪರಿಸರದಲ್ಲಿ ನಾವೆಲ್ಲರೂ ವಾಸಿಸುತ್ತಿದ್ದು, ಗ್ರಾಮಗಳಲ್ಲಿರುವ ಚರಂಡಿ ಸ್ವಚ್ಛತೆ ಗ್ರಾಪಂ ಕೆಲಸವೆಂದು ತಾತ್ಸಾರ ಮಾಡದೆ ನಮ್ಮ ಸುತ್ತಲಿನ ಪ್ರದೇಶದ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಇದರಿಂದ ಯಾವುದೇ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವುದರ ಜತೆಗೆ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಗರ್ಭಿಣಿಯರು ಮತ್ತು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಸರ್ಕಾರ ನೀಡುವ ಸವಲತ್ತುಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.
ಸಿಡಿಪಿಒ ಕುಮಾರ್, ತಾಲೂಕು ಪಂಚಾಯಿತಿ ಯೋಜನಾಧಿಕಾರಿ ದೀಪು, ಮುಖ್ಯ ಶಿಕ್ಷಕ ಬಸವರಾಜು, ಪಿಡಿಒ ಎಚ್.ಸಿ. ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.