ಸ್ವಚ್ಛತೆಗಾಗಿ ಹಸಿಕಸ-ಒಣಕಸ ಬೇರ್ಪಡಿಸಿ

IMG-20241203-WA0026
Published on

*ಯುವ ಉದ್ಯಮಿ ಶ್ರೀನಿಧಿ ಕುದರ್ ಸಲಹೆ 

*ನಗರಸಭೆ ವತಿಯಿಂದ ಹಸಿಕಸ, ಒಣಕಸ ಸಂಗ್ರಹಣೆ ಬುಟ್ಟಿ ವಿತರಣೆ 

ಚಾಮರಾಜನಗರ: ನಗರದ ವಾರ್ಡ್ ಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬರು ಹಸಿಕಸ, ಒಣಕಸವನ್ನು ಬೇರ್ಪಡಿಸಿ ಎಂದು ಯುವ ಉದ್ಯಮಿ ಶ್ರೀನಿಧಿ ಕುದರ್ ಸಲಹೆ ನೀಡಿದರು.

ನಗರದ 13ನೇ ವಾರ್ಡ್ ನಲ್ಲಿ ನಗರಸಭೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಹಸಿಕಸ, ಒಣಕಸ ಸಂಗ್ರಹಣೆ ಬುಟ್ಟಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕಸ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಹಲವಾರು ವಾರ್ಡ್ ಗಳಲ್ಲಿ ಕಸದ ಸಮಸ್ಯೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಕಸದ ಸಮಸ್ಯೆಯನ್ನು ಬಗೆಹರಿಸಲು ನಗರಸಭೆ ವತಿಯಿಂದ ಹಸಿಕಸ-ಒಣಕಸ ವಿಂಗಡಣೆಗಾಗಿ ಪ್ರತ್ಯೇಕ ಬುಟ್ಟಿಗಳನ್ನು ನೀಡಲಾಗುತ್ತಿದೆ ಎಂದರು.

ನಗರಸಭೆ ವತಿಯಿಂದ ನೀಡುವ ಕಸದ ಬುಟ್ಟಿಗಳನ್ನು ಅನ್ಯ ಕಾರ್ಯಕ್ಕೆ ಬಳಸದೇ ಪ್ರತಿಯೊಬ್ಬರು ಹಸಿಕಸ-ಒಣಕಸವನ್ನು ಬೇರ್ಪಡಿಸಿ ಪೌರಕಾರ್ಮಿಕರಿಗೆ ಸಹಕರಿಸಬೇಕು. ಈ ಮೂಲಕ ವಾರ್ಡ್ ಸ್ವಚ್ಛತೆಯನ್ನು ಕಾಪಾಡಬೇಕು. ವಾರ್ಡ್ ಸ್ವಚ್ಛವಾಗಿದ್ದರೇ ಪ್ರತಿಯೊಬ್ಬರ ಆರೋಗ್ಯವೂ ಸ್ವಚ್ಛ ವಾಗಿರುತ್ತದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಾರ್ಡ್ ಸದಸ್ಯೆ ಕಲಾವತಿ ರವಿಕುಮಾರ್ ಮಾತನಾಡಿ, 13ನೇ ವಾರ್ಡ್ ನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ವಾರ್ಡ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವಾಹನಗಳು ಬಂದಾಗ ಪ್ರತಿಯೊಬ್ಬರು ಹಸಿಕಸ-ಒಣಕಸವನ್ನು ಪ್ರತ್ಯೇಕಿಸಿ ವಿಂಗಡಣೆ ಮಾಡಿ ನೀಡಬೇಕು. ಈ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಪರಿಸರ ಇಂಜಿನಿಯರ್ ರೂಪ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಯಜಮಾನರಾದ ಮಾಧು ಹಾಗೂ ವಾರ್ಡ್ ನಿವಾಸಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net