ಸ್ವಚ್ಛತೆಗಾಗಿ ಪುರಸಭೆಯೊಂದಿಗೆ ಸಹಕರಿಸಿ

25 KRN-1
ಕೆ.ಆರ್.ನಗರದ ಗಾಂಧಿ ಉದ್ಯಾನದಲ್ಲಿ ನಮ್ಮ ಚಿತ್ತ ಸ್ವಚ್ಛತೆಯತ್ತ ಎಂಬ ಕಾರ್ಯಕ್ರಮದಲ್ಲಿ ಗಿಡಕ್ಕೆ ಗೊಬ್ಬರ ಹಾಕುವ ಮೂಲಕ ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ ಚಾಲನೆ ನೀಡಿದರು. ವಿ.ಸಿ.ಶಿವರಾಮು, ತೊಂಟದಾರ್ಯ, ರೀತುಸಿಂಗ್, ಎಚ್.ಎಸ್.ಲೋಕೇಶ್, ರಾಜೇಂದ್ರ, ರಶ್ಮಿ, ಮಂಜುನಾಥ್ ಇತರರು ಇದ್ದರು.
Published on

ಕೆ.ಆರ್.ನಗರ: ಪ್ರತಿಯೊಬ್ಬ ನಾಗರಿಕನೂ ಸ್ವಚ್ಛತೆಗಾಗಿ ಪುರಸಭೆಯೊಂದಿಗೆ ಸಹಕರಿಸಬೇಕು ಹಾಗೂ ಕಸ ಮತ್ತು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿದವರಿಗೆ ದಂಡ ವಿಧಿಸುವುದರ ಜತೆಗೆ ಅವರ ಮೇಲೆ ದೂರು ದಾಖಲಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ ತಿಳಿಸಿದರು.

ಪಟ್ಟಣದ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ಗುರುವಾರ ನಮ್ಮ ಚಿತ್ತ ಸ್ವಚ್ಛತೆಯತ್ತ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, 3-4 ತಿಂಗಳಿಂದ ಸ್ಥಗಿತಗೊಂಡಿದ್ದ ಸ್ವಚ್ಛತಾ ಅಭಿಯಾನ ಪ್ರಾರಂಭ ಮಾಡಿದ್ದು, ಎಲ್ಲ ಉದ್ಯಾನಗಳು ಮತ್ತು ವಾರ್ಡ್‌ಗಳಲ್ಲಿಯೂ ಹಂತ ಹಂತವಾಗಿ ಸ್ವಚ್ಛತೆ ಕೈಗೊಳ್ಳಲಾಗುವುದು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದ್ದು, ಪಟ್ಟಣವನ್ನು ಸ್ವಚ್ಛತೆಯಾಗಿಡುವುದರ ಜತೆಗೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಬೇಕೆಂಬ ಆದೇಶವಿದೆ. ಕೇವಲ ಪುರಸಭೆ ವತಿಯಿಂದ ಆಂದೋಲನ ಮಾಡಿದರೆ ಸಾಲದು, ವಿವಿಧ ಸಂಘ- ಸಂಸ್ಥೆಗಳು, ಮಾಧ್ಯಮದವರು, ನಾಗರಿಕರು ಈ ಬಗ್ಗೆ ಪ್ರಚಾರ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.

ಈಗಾಗಲೇ ಪಟ್ಟಣದ ಪ್ರತಿಯೊಂದು ಮನೆಗೂ ಒಣಕಸ ಮತ್ತು ಹಸಿ ಕಸವನ್ನು ಶೇಖರಿಸಲು ಬುಟ್ಟಿಗಳನ್ನು ನೀಡಲಾಗಿದೆ. ಆದ್ದರಿಂದ ಪ್ರತಿಯೊಂದು ಮನೆಯವರು ಪುರಸಭೆಯಿಂದ ಬರುವ ವಾಹನಕ್ಕೆ ಕಡ್ಡಾಯವಾಗಿ ಮನೆ ಕಸವನ್ನು ನೀಡಬೇಕು. ತಮ್ಮ ಖಾಲಿ ನಿವೇಶನಗಳನ್ನು ಆಗಾಗ್ಗೆ ಸ್ವಚ್ಛವಾಗಿಡಬೇಕು. ಇಲ್ಲದಿದ್ದಲಿ ಆ ಸ್ಥಳದಲ್ಲಿ ಕಾಡು ಪ್ರಾಣಿಗಳು, ಹಾವು, ಚೇಳುಗಳು ಸೇರಿಕೊಂಡರೆ ತೊಂದರೆಯಾಗಲಿದೆ ಎಂದು ಎಚ್ಚರಿಸಿದರು.

ಮನೆ ಮತ್ತು ಬೀದಿಗಳಿಂದ ಶೇಖರಿಸಿದ ಹಸಿ ಕಸದಿಂದ ನಮ್ಮ ಶುದ್ಧೀಕರಣ ಘಟಕದಲ್ಲಿ ಗೊಬ್ಬರ ತಯಾರಿಸಲಾಗಿದೆ. 1ಕೆಜಿಗೆ 2 ರೂ. ನಿಗದಿ ಮಾಡಲಾಗಿದ್ದು, ರೈತರು ಕೊಂಡು ಕೊಳ್ಳಬಹುದಾಗಿದೆ. ಉಳಿದ ಗೊಬ್ಬರವನ್ನು ಪಟ್ಟಣದ ಉದ್ಯಾನದ ಗಿಡ, ಮರಗಳಿಗೆ ಹಾಕಲಾಗುವುದು. ಶೇಖರಿಸಿಟ್ಟ ಒಣ ಕಸದಿಂದ ಇಟ್ಟಿಗೆಗಳು ಮತ್ತು ಪ್ಲಾಸ್ಟಿಕ್ ಚೀಲಗಳು ಇನ್ನಿತರ ವಸ್ತುಗಳನ್ನು ತಯಾರು ಮಾಡಬಹುದೆಂದು ಮಾಹಿತಿ ನೀಡಿದರು.

ಕೆ.ಆರ್.ನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಸಿ.ಶಿವರಾಮು, ಪುರಸಭೆ ಸದಸ್ಯ ತೋಂಟದಾರ್ಯ, ಪರಿಸರ ಇಂಜಿನಿಯರ್ ರೀತುಸಿಂಗ್, ಆರೋಗ್ಯ ನಿರೀಕ್ಷಕರಾದ ಎಚ್.ಎಸ್.ಲೋಕೇಶ್, ರಾಜೇಂದ್ರ, ವಲಯ ಅರಣ್ಯಾಧಿಕಾರಿ ರಶ್ಮಿ, ಉಪವಲರಣ್ಯಾಧಿಕಾರಿ ಮಂಜುನಾಥ್, ಪುರಸಭಾ ಸಿಬ್ಬಂದಿ ಯೋಗೇಶ್‌ಕುಮಾರ್, ಕಿಟ್ಟಣ್ಣ, ಕೃಷ್ಣ ಮತ್ತು ಪುರಸಭೆ ಪೌರಕಾರ್ಮಿಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net