

ಬೆಟ್ಟದಪುರ: ಸ್ವಚ್ಛತೆ ಹಾಗೂ ನೈರ್ಮಲ್ಯವನ್ನು ಕಾಪಾಡುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು. ಹಾಗಾಗಿ ಸ್ವಚ್ಛತೆ ಸೇರಿದಂತೆ ಹಲವು ವಿಚಾರಗಳನ್ನು ಗ್ರಾಮಸ್ಥರಿಗೆ ಅರಿವು ಮೂಡಿಸಿಲು ಎನ್‌ಎಸ್‌ಎಸ್ ಶಿಬಿರ ಸಹಕಾರಿಯಾಗಿದೆ ಎಂದು ಬೆಟ್ಟದಪುರದ ಎಸ್‌ಎಂಎಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ವಿ. ಮಂಜುನಾಥ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಬೆಟ್ಟದಪುರ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಬಿರಾರ್ಥಿಗಳು ಮಾಡುವ ಶ್ರಮದಾನಕ್ಕೆ ಗ್ರಾಮಸ್ಥರಿಂದ ಮನ್ನಣೆ ಸಿಗಬೇಕು. ಆ ನಿಟ್ಟಿನಲ್ಲಿ ಗ್ರಾಮಸ್ಥರೊಂದಿಗೆ ಹೊಂದಾಣಿಕೆಯಿಂದ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಂದೀಪ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶವೇ ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದು. ಇದಕ್ಕೆ ಗ್ರಾಮಸ್ಥರ ಸಹಕಾರವು ಮುಖ್ಯವಾಗಿರುತ್ತದೆ. ಕೆಲಸ ನಿರ್ವಹಿಸುವುದರ ಜತೆಗೆ, ಆರೋಗ್ಯದ ಕಡೆಗೂ ಪ್ರತಿಯೊಬ್ಬರೂ ಕಾಳಜಿವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಚಪ್ಪರದಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಸುನಿತಾ ಮಂಜು, ಎಸ್‌ಎಂಎಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎ.ವಿ. ಛಾಯಾ, ಪ್ರಾಂಶುಪಾಲ ರಾಜು, ಗ್ರಾಮದ ಯಜಮಾನರಾದ ಸಿ.ಎನ್. ಕಾಳೇಗೌಡ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶಿವಾನಂದ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಿ.ಎ. ನಂದೀಶ್, ಉಪಾಧ್ಯಕ್ಷೆ ಅನಿತಾ, ಮುಖಂಡರಾದ ವಸಂತ್, ಮಂಜುಳಾ, ನಿಂಗರಾಜೇಗೌಡ, ಶಿಬಿರಾಧಿಕಾರಿ ಕುಬೇರ್, ಉಪನ್ಯಾಸಕರಾದ ಸತೀಶ್, ಯಶವಂತ್ ಕುಮಾರ್ ಸೇರಿದಂತೆ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಇದ್ದರು.