

ಬಳ್ಳಾರಿ : ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತ-ಮುತ್ತ ಸ್ವಚ್ಛತೆ ಕಾಪಾಡುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಕೈಜೋಡಿಸಬೇಕು ಎಂದು ಡಿಎಚ್‌ಒ ಡಾ. ವೈ. ರಮೇಶಬಾಬು ಹೇಳಿದರು.
ನಗರದ ಡಿಎಚ್‌ಒ ಕಚೇರಿಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಸ್ಪತ್ರೆ ಸಹಯೋಗದೊಂದಿಗೆ ಸ್ವಚ್ಚತೆಯೇ ಸೇವೆ ಅಭಿಯಾನದಡಿ ಸೋಮವಾರ ನಡೆದ ಸ್ವಚ್ಚತಾ ಸೇವೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಷ್ಟ್ರೀಯ ಸ್ವಚ್ಚತಾ ಅಭಿಯಾನದಡಿ ಕಾಯಕಲ್ಪ ಕಾರ್ಯಕ್ರಮದ ಮೂಲಕ ಎಲ್ಲ ಆಸ್ಪತ್ರೆಗಳಲ್ಲಿ ರೋಗಿಗಳ ಆರೋಗ್ಯ ಕಾಪಾಡಲು ವೈದ್ಯಕೀಯ ತ್ಯಾಜ್ಯ ಎಲ್ಲೆಂದರಲ್ಲಿ ಬಿಸಾಡದೆ ನಿಯಮಾನುಸಾರ ಪ್ರತಿದಿನ ವಿಲೇವಾರಿ ಮಾಡಲಾಗುತ್ತಿದೆ, ಸಾರ್ವಜನಿಕರು ಕಸಕಡ್ಡಿಯನ್ನು ಚರಂಡಿಗಳಲ್ಲಿ ಹಾಕದೇ, ಕಸದ ವಾಹನದಲ್ಲಿ ಹಾಕುವ ಮೂಲಕ ಡೆಂೆ ನಿಯಂತ್ರಣಕ್ಕೆ ಸಹಕರಿಸಬೇಕು. ನೀರಿನ ಮೂಲಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ವಾಂತಿ-ಬೇಧಿಗಳಂತಹ ಕಾಯಿಲೆಗಳನ್ನು ನಿಯಂತ್ರಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಜಿಲ್ಲಾ ಶಸ್ತಚಿಕಿತ್ಸಕ ಡಾ. ಎನ್. ಬಸರೆಡ್ಡಿ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದರ ಜತೆಗೆ ಸ್ವಚ್ಚತೆಗೆ ಆದ್ಯತೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಬರುವ ಜನತೆಯು ಆಹಾರ ತ್ಯಾಜ್ಯ, ಟೀ-ಕಾಪಿ ಕಪ್, ಗಂಜಿಯ ಪ್ಲಾಸ್ಟಿಕ್ ಕವರ್, ಖಾಲಿಯಾದ ಎಳೆನೀರಿನ ಕಾಯಿಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಕಸದ ಬುಟ್ಟಿಗಳಲ್ಲಿಯೇ ಹಾಕಬೇಕು. ಸಾರ್ವಜನಿಕ ಆಸ್ಪತ್ರೆಯನ್ನು ಸ್ವಚ್ಚವಾಗಿಡಲು ಸಹಕರಿಸಬೇಕು ಎಂದು ವಿನಂತಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮಾಧಿಕಾರಿ ಡಾ. ಪೂರ್ಣಿಮಾ ಕಟ್ಟಿಮನಿ ಮಾತನಾಡಿದರು. ಇದೇ ವೇಳೆ ಅಧಿಕಾರಿಗಳು ಹಾಗೂ ನೌಕರರು ಸ್ವಚ್ಛತೆ ಕುರಿತ ಪ್ರತಿಜ್ಞಾ ವಿಧಿ ಸ್ವೀಕರಿಸಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.