ಸ್ವಚ್ಛತೆ ಕಾಪಾಡಲು ಜಿಪಂ ಸಿಇಒ ತಾಕೀತು

6be8de86-6550-439b-9ad1-d87cbb64ce76--006
Published on

ಚಿತ್ರದುರ್ಗ: ವಸತಿ ಶಾಲೆ ಹಾಗೂ ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ಮೂಲ ಸೌಕರ್ಯಗಳಿಗೆ ಒತ್ತು ಕೊಡಬೇಕು ಎಂದರು.
ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ‌್ಯನಿರ್ವಹಣೆ, ಸ್ನಾನಗೃಹ, ಶೌಚಗೃಹ ಸಹಿತ ಇಡೀ ಹಾಸ್ಟೆಲ್‌ನಲ್ಲಿ ಸಂಪೂರ್ಣ ಸ್ವಚ್ಛತೆಗೆ ನಿಗಾ ವಹಿಸಬೇಕು. ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರಬೇಕು. ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ದಿನದ 24 ಗಂಟೆ ಕಾವಲುಗಾರರು ನೇಮಿಸಬೇಕು ಎಂದು ಸೂಚಿಸಿದರು.
ಮೆನು ಪ್ರಕಾರ ತಾಜಾ ತರಕಾರಿ ಬಳಸಿ ಗುಣಮಟ್ಟದ ಆಹಾರ ತಯಾರಿಸಬೇಕು. ಅಡುಗೆಯವರು ಸುರಕ್ಷಿತ ಉಡುಪು ಧರಿಸಿರಬೇಕು. ದೂರು ಪೆಟ್ಟಿಗೆ, ಪುಸ್ತಕ ಕಡ್ಡಾಯವಾಗಿ ನಿರ್ವಹಿಸಬೇಕು. ಊಟದ ಸಮಯದಲ್ಲಿ ವಾರ್ಡನ್‌ಗಳು ಹಾಜರಿರಬೇಕು. ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ವಾರ್ಡನ್‌ಗಳು ಭೇಟಿ ನೀಡಿ ಶೈಕ್ಷಣಿಕ ಪ್ರಗತಿಯ ಮಾಹಿತಿ ಪಡೆಯಲು ತಿಳಿಸಿದರು.
ಪಾಲಕರೊಂದಿಗೆ ಕಾಲ, ಕಾಲಕ್ಕೆ ಸಭೆ ನಡೆಸಲು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ವರದಿ ಸಲ್ಲಿಸುವಂತೆ ತಾಕೀತು ಮಾಡಿದರು.
ಜಿಪಂ ಉಪ ಕಾರ‌್ಯದರ್ಶಿ ಕೆ.ತಿಮ್ಮಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕ ಲ್ಯಾಣಾಧಿಕಾರಿ ಒ.ಪರಮೇಶ್ವರಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸುಬ್ರನಾಯ್ಕ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಕಾಂತರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net