ಸ್ವಚ್ಛತೆ, ಅಭಿವೃದ್ಧಿ ಕಾಮಗಾರಿ ಪರಿಶೀಲನೆ

20blrp2
Published on

ಬೇಲೂರು: ಪಟ್ಟಣದ ನಗರದ 13ನೇ ವಾರ್ಡಿಗೆ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಅವರು ಸದಸ್ಯ ಫಯಾಜ್ ಅಹಮದ್ ಹಾಗೂ ಸಿಬ್ಬಂದಿಯೊಂದಿಗೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿ ಸ್ವಚ್ಛತೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.


ತೀರ್ಥಕುಮಾರಿ ಮಾತನಾಡಿ, ಪುರಸಭೆಗೆ ಸೇರಿದ ಪ್ರತಿಯೊಂದು ವಾರ್ಡ್‌ಗೂ ವಾರಕ್ಕೊಮ್ಮೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿ ಕಾಮಗಾರಿ ಮತ್ತು ಸ್ವಚ್ಛತೆ ಪರಿಶೀಲಿಸಲಾಗುತ್ತಿದೆ. ಮೂಡಿಗೆರೆ ರಸ್ತೆಯಲ್ಲಿನ ಕಾಂಕ್ರಿಟ್ ರಸ್ತೆ ಪರಿಶೀಲನೆ ಮತ್ತು ಚರಂಡಿಗಳಲ್ಲಿ ಕಸ ವಿಲೇವಾರಿ, ಖಾಲಿ ನಿವೇಶನಗಳಲ್ಲಿ ಕಸದಿಂದ ಆಗುತ್ತಿರುವ ಅನೈರ್ಮಲ್ಯದಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹೆಚ್ಚಾಗಲಿದೆ. ಹೀಗಾಗಿ ನಿವೇಶನದ ಮಾಲೀಕರಿಗೆ ಕಸ, ಗಿಡಗಳನ್ನು ಸ್ವಚ್ಛಗೊಳಿಸುವಂತೆ ಸೂಚಿಸಿ, ನಂತರ ಮನೆ, ನಿವೇಶನದ ಕಂದಾಯದ ಜತೆ ಅನೈರ್ಮಲ್ಯತೆ ಸೃಷ್ಟಿಗೆ ಕಾರಣರಾದವರಿಗೆ ದಂಡ ವಿಧಿಸಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಗಮನಹರಿಸಿ ಎಲ್ಲೆಂದರಲ್ಲಿ ಕಸ ಹಾಕದೆ, ನಿವೇಶನದಲ್ಲಿ ಗಿಡಗಂಟಿಗಳು ಬೆಳೆಯದಂತೆ ನಿಗಾ ವಹಿಸಬೇಕು. ಈ ಮೂಲಕ ಪುರಸಭೆಯೊಂದಿಗೆ ಕೈ ಜೋಡಿಸಿ ಸ್ವಚ್ಛತೆ ಕಾಪಾಡಲು ಮುಂದಾಗಬೇಕು ಎಂದರು.


ಪುರಸಭೆ ಆರೋಗ್ಯಾಧಿಕಾರಿ ಲೋಹಿತ್, ಜ್ಯೋತಿ, ಪರಿಸರ ಅಭಿಯಂತರ ಮಧುಸೂದನ್, ಸಿಬ್ಬಂದಿ ಸುನೀಲ್, ಸಲ್ಮಾನ್, ಮೋಹನೇಶ್, ಪೃಥ್ವಿ, ನಿವಾಸಿಗಳಾದ ದಯಾನಂದ್, ಮುದ್ದಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net