

ಕಲಬುರಗಿ: ಸಾಧನೆಗೆ ಸ್ವಚ್ಛ ಮನಸ್ಸು, ಶುದ್ಧ ಉದ್ದೇಶವಿರಬೇಕು. ಆಗ ಮಾತ್ರ ನಾವು ಮಾಡುವ ಕಾಯಕಕ್ಕೆ ಶಕ್ತಿ ದೊರೆತು ಸಾಧನೆಯ ಶಿಖರವೇರಲು ಸಾಧ್ಯ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ, ಭಾಲ್ಕಿಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಕರುಣೇಶ್ವರ ನಗರದಲ್ಲಿನ ವಿವೇಕಾನಂದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರೌಢ ಶಾಲೆ ಮತ್ತು ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶಿಕ್ಷಣ ಜತೆಗೆ ಸಂಸ್ಕಾರವನ್ನು ನೀಡುವ ಶಾಲೆಗಳನ್ನು ಮುನ್ನಡೆಸಲು ಹಲವು ಸವಾಲು, ಅಡೆತಡೆಗಳು ಎದುರಾಗುತ್ತವೆ. ಅದನ್ನು ಮೀರಿ ಬೆಳೆಯುವ ಛಲ ನಮ್ಮದಾಗಬೇಕು ಎಂದು ಸಲಹೆ ನೀಡಿದರು.
ಸತತ ಪ್ರಯತ್ನ, ಪರಿಶ್ರಮ, ಹೊಸ ಆಲೋಚನೆ ಇದ್ದಾಗ ಸಾಧನೆ ಸಾಧ್ಯವಿದೆ. ಪ್ರತಿ ವರ್ಷ ಉತ್ಸಾಹ ಹೆಚ್ಚಬೇಕು. ಮನಸ್ಸುಗಳು ಒಂದಾದಾಗ, ಮನೆಯಲ್ಲಿ ಸತಿ ಪತಿಗಳು ಒಂದಾಗಿ ನಡೆದಾಗ ಬೃಹತ್ ಸಂಸ್ಥೆ ತಲೆ ಎತ್ತಿ ನಿಲ್ಲಲು ಸಾಧ್ಯ. ವಿವೇಕಾನಂದರAಥ ಮಹಾಪುರುಷನ ಹೆಸರಿನಲ್ಲಿ ಶಾಲೆ ಸದಾ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುತ್ತವೆ ಎಂದು ಹೇಳಿದರು.
ಶಾಲೆ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಪ್ರಾಸ್ತಾವಿಕ ಮಾತನಾಡಿ, ಪುಟ್ಟ ಹೆಜ್ಜೆಗಳನ್ನಿಡುತ್ತ ಗುಣಮಟ್ಟದ ಶಿಕ್ಷಣವನ್ನು ಆದ್ಯತೆಯನ್ನಾಗಿ ಮಾಡಿಕೊಂಡು ಶಾಲೆ ಆರಂಭಿಸಿದ್ದು, ಎಲ್ಲರ ಸಹಕಾರದಿಂದ ಈ ಮಟ್ಟಕ್ಕೆ ಬೆಳೆದಿದೆ. ಬೋಧನೆ, ಶಿಕ್ಷಣದಲ್ಲಿ ರಾಜಿ ಮಾಡಿಕೊಳ್ಳದೇ ಸಾಗುವುದೇ ನಮ್ಮ ಗುರಿ ಎಂದು ಹೇಳಿದರು.
ಶಾಲೆಯಲ್ಲಿ ಕಾರ್ಯನಿರ್ವಹಿಸುವ ವಾಹನ ಚಾಲಕರು, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷೆ ಸುವರ್ಣ ಭಗವತಿ, ಪತ್ರಕರ್ತ ದೇವಯ್ಯ ಗುತ್ತೇದಾರ, ಪ್ರಮುಖರಾದ ಶಾಂತಾ ನರಗುಂದ, ಧನ್ಯಕುಮಾರ ಕಮತಗಿ, ಸಂಜೀವಕುಮಾರ ಮಾನ್ವಿ, ಶಿವಕುಮಾರ, ವೀರೇಂದ್ರ, ವಿಜಯಕುಮಾರ ರಾಠೋಡ, ಸಂತೋಷ ಕಮತಗಿ ಇತರರಿದ್ದರು.