

ಬೆಳಗಾವಿ: ಶಹಾಪುರದ ಸರಸ್ವತಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಸ್ವಚ್ಛ ಭಾರತ ಅಭಿಯಾನ ಜರುಗಿತು. ಅಭಿಯಾನದ ನಿಮಿತ್ತ ವಿದ್ಯಾರ್ಥಿನಿಯರಿಗೆ ತಮ್ಮ ಮನೆಯಿಂದ ಪ್ಲಾಸ್ಟಿಕ್ ತ್ಯಜಿಸುವಂತೆ ತಿಳಿಸಿದ್ದರಿಂದ ವಿದ್ಯಾರ್ಥಿನಿಯರು ತಮ್ಮ ಮನೆಗಳಲ್ಲಿನ ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ತಂದು ಮಹಾನಗರ ಪಾಲಿಕೆಯ ಕಸ ವಿಲೇವಾರಿ ವಾಹನಕ್ಕೆ ಹಾಕಿದರು.
ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಸಬೇಕು ಹಾಗೂ ಮನೆಯಲ್ಲಿ ಹಸಿ ಕಸ, ಒಣ ಕಸ ಬೇರ್ಪಡಿಸಿ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ತಿಳಿವಳಿಕೆ ಮೂಡಿಸಲಾಯಿತು.
ಶಹಾಪುರದ ಬೀದಿಗಳಲ್ಲಿ ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣ, ಸ್ವಚ್ಛ ಭಾರತ ಅಭಿಯಾನದ ಜಾಗೃತಿ ಜಾಥಾ ನಡೆಯಿತು. ಕಾಲೇಜಿನ ಪ್ರಾಚಾರ್ಯ ಎನ್.ಬಿ. ಶಿರಶ್ಯಾಡ ಅಧ್ಯಕ್ಷತೆ ವಹಿಸಿದ್ದರು. ಅನಸೂಯಾ ಹಿರೇಮಠ, ಜ್ಯೋತಿ ಹಾಗೂ ಇತರರಿದ್ದರು.