

ಬೀದರ್: ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ನಡೆಸುತ್ತಿರುವ ಸ್ವಚ್ಛ ಹಾಗೂ ಬಯಲು ಬಹಿರ್ದೆಸೆ ಮುಕ್ತ ಬೀದರ್ ಅಭಿಯಾನಕ್ಕೆ ಎಲ್ಲರೂ ಸಾಥ್ ನೀಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಹೇಳಿದರು.
ಇಲ್ಲಿಯ ಅಲ್ಲಮಪ್ರಭುನಗರದ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸ್ವಸಹಾಯ ಗುಂಪುಗಳ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ವೈಯಕ್ತಿಕ ಶುಚಿತ್ವ ಕಾಪಾಡಬೇಕು. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಬೇಕು. ಹಾಗಾದಲ್ಲಿ ತಾನಾಗಿಯೇ ಸ್ವಚ್ಛ ಹಾಗೂ ಸುಂದರ ಬೀದರ್ ನಿರ್ಮಾಣ ಆಗಲಿದೆ ಎಂದು ತಿಳಿಸಿದರು.
ಸ್ವಚ್ಛ ಬೀದರ್ ಅಭಿಯಾನದಲ್ಲಿ ಮಕ್ಕಳು ಪ್ರಮುಖ ಪಾತ್ರ ವಹಿಸಬೇಕು. ಕುಟುಂಬದ ಸದಸ್ಯರು, ನೆರೆ ಹೊರೆಯವರಲ್ಲಿ ನೈರ್ಮಲ್ಯ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯ ಅಭಿಯಾನಕ್ಕೆ ಸಂಘ ಸಂಸ್ಥೆಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಸಹಕಾರ ದೊರೆಯುತ್ತಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ಗುರುರಾಜ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಗರಾಜ ಮಠ, ಜಿಲ್ಲಾ ಪಂಚಾಯಿತಿ ಲೆಕ್ಕ ಸಹಾಯಕ ಪ್ರವೀಣ ಸ್ವಾಮಿ, ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪ್ರತಾಪುರ, ಎನ್.ಎಚ್.ಎಂ. ಜಿಲ್ಲಾ ವ್ಯವಸ್ಥಾಪಕ ಶಿವಶಂಕರ ಬೆಳಮಗಿ, ವಕೀಲ ಪ್ರಶಾಂತ ಪಾಟೀಲ, ವರದಯ್ಯ ಸ್ವಾಮಿ, ಪ್ರಶಾಂತ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳು ಪ್ರತಿನಿಧಿಗಳು ಇದ್ದರು.